ADVERTISEMENT

ಧಾರವಾಡ ಜಿಲ್ಲೆಯಲ್ಲಿ 10,200 ಕಾರ್ಮಿಕರ ನಕಲಿ ಕಾರ್ಡ್ ರದ್ದು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಯಾಚರಣೆ

ಗೌರಮ್ಮ ಕಟ್ಟಿಮನಿ
Published 26 ಸೆಪ್ಟೆಂಬರ್ 2025, 5:02 IST
Last Updated 26 ಸೆಪ್ಟೆಂಬರ್ 2025, 5:02 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಹುಬ್ಬಳ್ಳಿ: ಕೋವಿಡ್‌ ನಂತರದಲ್ಲಿ ಕಾರ್ಮಿಕರ ಕಾರ್ಡ್‌ಗಳ ದುರ್ಬಳಕೆ ಹೆಚ್ಚಾಗುತ್ತಿದ್ದು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಧಾರವಾಡ ಜಿಲ್ಲೆಯಲ್ಲಿ 2023ರಿಂದ ಈವರೆಗೆ ಒಟ್ಟು 10,200 ಕಾರ್ಡ್‌ಗಳನ್ನು ರದ್ದುಪಡಿಸಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದ್ದು, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕಾರ್ಮಿಕರ ಕಾರ್ಡ್ ಹೊಂದುವುದು ಕಡ್ದಾಯ. ಜಿಲ್ಲೆಯಲ್ಲಿ 2023ರಿಂದ ಈವರೆಗೆ ಒಟ್ಟು 26,435 ಕಾರ್ಮಿಕರ ನೋಂದಣಿ ಆಗಿದೆ. 

‘ಕೋವಿಡ್‌ಗೂ ಮುನ್ನ ಕಾರ್ಮಿಕರ ಕಾರ್ಡ್‌ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇತ್ತು. ಕೋವಿಡ್‌ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಕಾರ್ಮಿಕರು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರು. ಕೋವಿಡ್‌ ನಂತರದಲ್ಲಿ ಬಹುತೇಕರು ಉದ್ಯೋಗ ಕಳೆದುಕೊಂಡು, ಆರ್ಥಿಕ ತೊಂದರೆಗೊಳಗಾಗಿ ನಕಲಿ ಕಾರ್ಡ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಇದರಿಂದ ನೈಜ ಕಾರ್ಮಿಕರು ಸೌಲಭ್ಯದಿಂದ ವಂಚಿತರಾದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಕಾರ್ಮಿಕರ ಕಲ್ಯಾಣ ಮಂಡಳಿಯು ಎರಡ್ಮೂರು ಹಂತದಲ್ಲಿ ದಾಖಲೆಗಳನ್ನು ಪರಿಶೀಲಿಸಿ, ನಕಲಿ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಸಚಿನ್ ಹಳೇಮನಿ ‘ಪ್ರಜಾವಾಣಿ’ಗೆ ತಿಳಿಸಿದರು.  

ADVERTISEMENT

ಸ್ಥಳಕ್ಕೆ ಭೇಟಿ, ಪರಿಶೀಲನೆ: ಕಾರ್ಮಿಕರು ಅರ್ಜಿ ಸಲ್ಲಿಸಿದ ನಂತರ ಅವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ನಂತರ ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಅವರು ಕೆಲಸ ಮಾಡುತ್ತಿರುವ ಬಗ್ಗೆ ಖಾತರಿ ಮಾಡಿಕೊಳ್ಳುತ್ತಾರೆ. ಆಗ ದಾಖಲೆ ಮತ್ತು  ಮಾಹಿತಿ ಸುಳ್ಳಾಗಿದ್ದರೆ, ಅಂತಹವರ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತದೆ. ಆನ್‌ಲೈನ್‌ ಮೂಲಕವೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ವರ್ಷ ಕಾರ್ಮಿಕ ಕಾರ್ಡ್‌ಗಳನ್ನು ನವೀಕರಣ ಮಾಡಿಕೊಳ್ಳಬೇಕು. ಆಗಲೂ ಸ್ಥಳಗಳಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ’ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.  

18ರಿಂದ 60 ವರ್ಷದೊಳಗಿನವರು ವರ್ಷದಲ್ಲಿ ಕನಿಷ್ಠ 90ದಿನ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಉದ್ಯೋಗ ದೃಢೀಕರಣ ಪತ್ರ, ಅರ್ಜಿದಾರ ಮತ್ತು ಅವಲಂಬಿತರ ಆಧಾರ್‌ ಕಾರ್ಡ್‌ ಪ್ರತಿ, ಅರ್ಜಿದಾರರ ಬ್ಯಾಂಕ್‌ ಪಾಸ್‌ಬುಕ್‌, ಅರ್ಜಿದಾರರ ಆಧಾರ್‌ ಕಾರ್ಡ್‌ಗೆ ಲಿಂಕ್‌ ಆಗಿರುವ ಮೊ.ಸಂಖ್ಯೆ ಸೇರಿ ಅಗತ್ಯ ದಾಖಲೆಗಳೊಂದಿಗೆ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಕಾರ್ಮಿಕ ಕಾರ್ಡ್ ಪಡೆದಲ್ಲಿ ಮಂಡಳಿಯಿಂದ 12ಯೋಜನೆಗಳನ್ನು ಪಡೆಯಬಹುದು. ಪಿಂಚಣಿ , ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ಟೂಲ್‌ ಕಿಟ್‌, ಹೆರಿಗೆ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ,ಮದುವೆ ಸಹಾಯಧನ, ತಾಯಿ ಮಗು ಸಹಾಯಹಸ್ತ ಸೌಲಭ್ಯವನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ ಎಂದು ಸಚಿನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.