ADVERTISEMENT

ಕಾರ್ಮಿಕ, ಕೃಷಿ ಕಾಯ್ದೆ ರದ್ದುಗೊಳಿಸಿ

ಸಿಐಟಿಯು, ಎಐಟಿಯುಸಿ, ಕೆಪಿಆರ್‌ಎಸ್ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 12:49 IST
Last Updated 9 ಆಗಸ್ಟ್ 2021, 12:49 IST
ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಸೋಮವಾರ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗೆ ಮನವಿ ಸಲ್ಲಿಸಿದರು
ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಸೋಮವಾರ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾರ್ಥ, ರೈತ ಮತ್ತು ಕಾರ್ಮಿಕ ಸಂಘಟನೆಗಳು ‘ಭಾರತ ಉಳಿಸಿ ದಿನ’ವಾಗಿ ದೇಶದಾದ್ಯಂತ ನೀಡಿದ್ದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಸಿಐಟಿಯು, ಎಐಟಿಯುಸಿ ಹಾಗೂ ಕೆಪಿಆರ್‌ಎಸ್ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ದೇಶದ ಸಂಪತ್ತು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಮಿನಿ ವಿಧಾನಸೌಧದವರೆಗೆ ಮೆರವಣಿಗೆ ಬಂದು ತಹಶೀಲ್ದಾರ್ ಮುಖಾಂತರ ಪ್ರಧಾನಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾನತಾಡಿ, ‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು, ಜನ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು. ರೈತರ ಎಲ್ಲಾ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಮತ್ತು ರೈತರ ಸಾಲ ಮನ್ನಾ ಮಾಡಲು ಋಣಮುಕ್ತ ಕಾನೂನು ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ದೇವಾನಂದ ಜಗಾಪೂರ, ‘ರಾಜ್ಯದ ಎಪಿಎಂಸಿ, ಭೂ ಸುಧಾರಣೆ ಹಾಗೂ ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಪೆಟ್ರೋಲ್, ಡಿಸೇಲ್, ಅಡಿಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿಕೊಂಡು ಸಮರ್ಪಕ ಪರಿಹಾರ ನೀಡಬೇಕು’ ಎಂದರು.

ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಬಿ.ಎಸ್. ಸೊಪ್ಪಿನ, ‘ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ಆರ್ಥಿಕ ನೆರವು ಹಾಗೂ ತಲಾ 10 ಕೆ.ಜಿ ಆಹಾರ ಧಾನ್ಯ ನೀಡಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಬಡವರಿಗೆ ಹೊರೆಯಾಗದಂತಹ ಜನಪರ ಯೋಜನೆಗಳನ್ನು ಸರ್ಕಾರಗಳು ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಎಐಟಿಯುಸಿ ಮುಖಂಡರಾದ ಬಿ.ಎ. ಮುಧೋಳ, ಮಹದಾಯಿ ಹೋರಾಟಗಾರ ಅಮೃತ ಇಜಾರಿ, ಕಾರ್ಮಿಕ ಮುಖಂಡರಾದ ಎ.ಎಸ್. ಪೀರಜಾದೆ, ಎಂ.ಎಚ್. ಮುಲ್ಲಾ, ಗುರುಸಿದ್ದಪ್ಪ ಅಂಬಿಗೇರ, ಬಾಬಾಜಾನ ಮುಧೋಳ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ, ಹನುಮಂತ ಅಂಬಿಗೇರ, ಹನುಮಂತ ಚಲವಾದಿ, ಬುದ್ದಿವಂತ ನರೇಂದ್ರ, ರಮೇಶ ಬೂಸ್ಲೆ, ಎನ್.ಐ. ನದಾಫ, ಎ.ಆರ್. ಟಪಾಲವಾಲೆ, ಹನಮಂತ ಅಂಬಿಗೇರ, ಮಹ್ಮದರಫೀಕ್ ಮುಳುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.