ADVERTISEMENT

ಕಳಪೆ ಬಿತ್ತನೆ ಬೀಜ ಪೂರೈಕೆ | ಆರೋಪ: ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:21 IST
Last Updated 29 ಅಕ್ಟೋಬರ್ 2025, 5:21 IST
ಕಳಪೆ ಬೀಜ ಪೂರೈಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಸದಸ್ಯರು ನವಲಗುಂದ ಬಳಿಯ ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು
ಕಳಪೆ ಬೀಜ ಪೂರೈಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಸದಸ್ಯರು ನವಲಗುಂದ ಬಳಿಯ ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು   

ನವಲಗುಂದ: ಕಳಪೆ ಬಿತ್ತನೆ ಬೀಜ ಪೂರೈಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಮಹದಾಯಿ,  ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟದ ಸದಸ್ಯರು ಮಂಗಳವಾರ ಹುಬ್ಬಳ್ಳಿ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, ತಾಲ್ಲೂಕಿನಾದ್ಯಂತ ಗೋವಿನಜೋಳವನ್ನು ರೈತರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತಿದ ಬೀಜಗಳು ಕಳಪೆಯಾಗಿದ್ದು, ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿಯಿಂದ ಎಕರೆಗೆ ತಲಾ ₹50 ಸಾವಿರ ಪರಿಹಾರ ಕೊಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರಘುನಾಥ ನಡುವಿನಮನಿ, ಶಂಕರಪ್ಪ ಅಂಬಲಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಹೆಸರು, ಹತ್ತಿ, ಗೋವಿನಜೋಳ ಸೇರಿದಂತೆ ಅನೇಕ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿದ್ದು, ಈವರೆಗೆ ಬೆಳೆ ವಿಮೆ ಬಿಡುಗಡೆ ಆಗಿಲ್ಲ. ಕೂಡಲೆ ಬೆಳೆ ವಿಮೆ ಬಿಡುಗಡೆಗೆ ಕ್ರಮ ವಹಿಸಬೇಕು. ಪ್ರಸ್ತುತ ಸರ್ಕಾರ ನೀಡಿರುವ ಬೆಳೆ ಹಾನಿ ಪರಿಹಾರವು ಸಾಕಷ್ಟು ರೈತರಿಗೆ ತಲುಪಿಲ್ಲ. ಎಲ್ಲ ರೈತರ ಖಾತೆಗೆ ಪರಿಹಾರದ ಹಣವನ್ನು ಕೂಡಲೇ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಸಕ ಎನ್.ಎಚ್.ಕೋನರಡ್ಡಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿಂಗರಡ್ಡಿ ನಾವಳ್ಳಿ, ಡಿ.ಎಸ್.ಗುಡಿಸಾಗರ, ಶಿವು ಗುಡಿಸಲಮನಿ,  ವಿ.ಕೆ.ಕನಕರಡ್ಡಿ, ಯಲ್ಲಪ್ಪ ಗಾಣಿಗೇರ, ಸಿದ್ದಲಿಂಗಪ್ಪ ಮಾಳಣ್ಣವರ, ಜಿ.ಕೆ.ದೊಡ್ಡಮನಿ, ಎನ್.ಬಿ.ಕುಲಕರ್ಣಿ,ಬಸನಗೌಡ ಮರಿಗೌಡರ, ವೀರಯ್ಯ ಹಿರೇಮಠ, ಭರಮಪ್ಪ ಕಾತರಕಿ, ಟಿ.ಎನ್.ಸಾಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.