ADVERTISEMENT

ಕೃಷಿ ಕೈಗಾರಿಕೆ ಲಾಭ ರೈತರಿಗೂ ಲಭಿಸಲಿ: ಉಪರಾಷ್ಟ್ರಪತಿ ಜಗದೀಪ ಧನಕರ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 11:20 IST
Last Updated 16 ಜನವರಿ 2025, 11:20 IST
<div class="paragraphs"><p>ಉಪರಾಷ್ಟ್ರಪತಿ ಜಗದೀಪ ಧನಕರ್‌</p></div>

ಉಪರಾಷ್ಟ್ರಪತಿ ಜಗದೀಪ ಧನಕರ್‌

   

ಧಾರವಾಡ: ‘ಕೃಷಿ ಮತ್ತು ಕೃಷಿ ಉತ್ಪನ್ನಗಳ ಆಧಾರಿತ ಕೈಗಾರಿಕೆಗಳು (ಆಹಾರ, ಜವಳಿ, ಅಡುಗೆ ಎಣ್ಣೆ...) ಉನ್ನತಿ ಸಾಧಿಸಿ, ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿವೆ. ಲಾಭವು ರೈತರಿಗೂ ಸಮಾನವಾಗಿ ಲಭಿಸಬೇಕು’ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕೃಷಿ ಮಹಾವಿದ್ಯಾಲಯದ ಅಮೃತಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಕೃಷಿ ಕ್ಷೇತ್ರದ ಕೈಗಾರಿಕಾ ಸಂಸ್ಥೆಗಳು ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್‌) ರೈತರ ಅಭ್ಯುದಯ ಮತ್ತು ಕೃಷಿ ಸಂಶೋಧನೆಗೆ ನೀಡುವ ಬದ್ಧತೆ ತೋರಬೇಕು. ಕೇಂದ್ರ ಸರ್ಕಾರವು ರಾಷ್ಟ್ರೀಯ ಅರಿಸಿನ ಮಂಡಳಿ ಸ್ಥಾಪಿಸಿ ಅರಿಸಿನ ಬೆಳೆ ಉನ್ನತಿಗೆ ಗಮನ ಹರಿಸಿದೆ. ಐದು ವರ್ಷಗಳಲ್ಲಿ ಅರಿಸಿನ ಉತ್ಪಾದನೆ ದುಪ್ಪಟ್ಟಾಗಲಿದೆ. ಅರಿಸಿನ ರಫ್ತಿಗೆ ಸಹಕಾರಿಯಾಗಲಿದೆ. ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಬೆಳೆಗಾರರಿಗೆ ಅನುಕೂಲವಾಗಲಿದೆ. ಅರಿಸಿನದಲ್ಲಿ ಔಷಧೀಯ ಗುಣ ಇದೆ‘ ಎಂದು ವಿಶ್ಲೇಷಿಸಿದರು.

ADVERTISEMENT

‘ಸರ್ಕಾರವು ಇಂಥ ಇನ್ನಷ್ಟು ಮಂಡಳಿಗಳನ್ನು ಸ್ಥಾಪಿಸಲು ಮುಂದಾಗಬೇಕು. ಹವಾಮಾನ ವೈಪರಿತ್ಯ ಮತ್ತು ಅನಿಶ್ಚಿತ ಮಾರುಕಟ್ಟೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು. ಆರ್ಥಿಕ ಭದ್ರತೆ ಕಲ್ಪಿಸಬೇಕು. ಕೃಷಿಗೆ ನೀಡುವ ಸಹಾಯಧನ (ಸಬ್ಸಿಡಿ) , ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸಬೇಕು. ಅವುಗಳ ಪ್ರಯೋಜನ ಪಡೆದು ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಅಳವಡಿಕೆಗೆ ಗಮನ ಹರಿಸಬೇಕು. ಕೃಷಿ ಕ್ಷೇತ್ರ ಉಜ್ವಲವಾಗಿದ್ದರೆ ದೇಶ ಸಮೃದ್ಧವಾಗಿರುತ್ತದೆ. ಆರ್ಥಿಕ ಪ್ರಗತಿಯಾಗುತ್ತದೆ’ ಎಂದು ಹೇಳಿದರು.

‘ಹಾವರ್ಡ್‌ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ 50 ಬಿಲಿಯನ್‌ ಡಾಲರ್‌ಗೂ ಹೆಚ್ಚು ಮೊತ್ತದ ಕೊಡುಗೆ ನೀಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡಬೇಕು. ಕಲಿತ ಸಂಸ್ಥೆಯೊಂದಿ ಬಾಂಧವ್ಯ ಕಾಪಾಡಿಕೊಳ್ಳಲು, ಸಂಸ್ಥೆಯ ಬೆಳವಣಿಗೆಗೆ ಅನುಕೂಲವಾಗಲಿದೆ’ ಎಂದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಕೇಂದ್ರ ಗ್ರಾಹಕರ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌.ಲಾಡ್‌, ಕೃಷಿ ವಿ.ವಿ. ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ, ಸುದೇಶ ಧನಕರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.