ADVERTISEMENT

ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ

ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಸನಾ, ಜ್ಯೋತಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 15:38 IST
Last Updated 29 ಆಗಸ್ಟ್ 2019, 15:38 IST
ಹುಬ್ಬಳ್ಳಿಯಲ್ಲಿ ಗುರುವಾರ ಸಾಧಕ ಕ್ರೀಡಾಪಟುಗಳನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು
ಹುಬ್ಬಳ್ಳಿಯಲ್ಲಿ ಗುರುವಾರ ಸಾಧಕ ಕ್ರೀಡಾಪಟುಗಳನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು   

ಹುಬ್ಬಳ್ಳಿ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಜೆ.ಸಿ. ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗುರುವಾರ ಸನ್ಮಾನಿಸಿತು.

ಇದೇ ವರ್ಷ ಪವರ್ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಅಭಿಷೇಕ ಡಿ. ಹೊರಕೇರಿ, ರಾಷ್ಟ್ರೀಯ ಟೂರ್ನಿಯಲ್ಲಿ ಕಂಚು ಜಯಿಸಿದ್ದ ಸನಾ ಮಳಗಿ, ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಚೆಸ್‌ ಆಟಗಾರ್ತಿ ತನಿಷಾ ಶೀತಲ್‌ ಗೋಟಡ್ಕಿ, ಜಪಾನ್‌ನಲ್ಲಿ ಪ್ಯಾರಾ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದ ಡಾ. ನಜೀಮ್‌ ಜಾವೇದ್‌ ಖಾನ್‌, ಪ್ಯಾರಾ ಶೂಟರ್‌ ಜ್ಯೋತಿ ಸಣ್ಣಕ್ಕಿ, ಟೇಕ್ವಾಂಡೊದಲ್ಲಿ ಸಾಧನೆ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯದ ತಬಸ್ಸುಮ್‌ ಖಾಜಿ, ಫಾತೂಬಿ ಎಂ. ಖನ್ನೈ (ಟೆನಿಕಾಯ್ಟ್‌), ಜಂಪ್‌ ರೋಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಕೃತಿಕಾ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭ ಉದ್ಘಾಟಿಸಿದ ಕ.ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಂ. ಪಾಟೀಲ ‘ಧ್ಯಾನಚಂದ್‌ ಅವರ ಅಮೋಘ ಆಟಕ್ಕೆ ಜಗತ್ತೇ ಮನಸೋತು ಹೋಗಿತ್ತು. ಅವರು ಚೆಂಡಿನೊಂದಿಗೆ ನಿರಂತರವಾಗಿ ಹಿಡಿತ ಸಾಧಿಸುತ್ತಿದ್ದರು. ಅವರಿಗೆ ಯಾವುದೇ ಸ್ಟಿಕ್‌ ಕೊಟ್ಟರೂ ಗೋಲು ಗಳಿಸುತ್ತಿದ್ದರು. ಇದರಿಂದಲೇ ಹಾಕಿಮಾಂತ್ರಿಕ ಎನಿಸಿಕೊಂಡರು’ ಎಂದರು.

ADVERTISEMENT

ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ಉಪವಲಯದ ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ. ಬಸವರಾಜ ರಾಜರುಷಿ ‘ಪರಿಶ್ರಮದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಫಲಿತಾಂಶದ ಬಗ್ಗೆ ಚಿಂತಿಸದೇ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗೆ ಮಹತ್ವ ಕೊಡಬೇಕು’ ಎಂದರು.

ಬಿವಿಬಿ ಎಂಜಿನಿಯರ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶಪ್ಪ ಎಂ. ಕುರಗೋಡಿ, ಧಾರವಾಡ ಜಿಲ್ಲಾ ಕರಾಟೆ ಸ್ಪೋರ್ಟ್ಸ್‌ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ಜೆ. ಸಿಂಗ್‌, ನೆಹರೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಇರ್ಷಾದ್‌ ಎಂ. ಮಕ್ಕುಬಾಯಿ, ನೈರುತ್ಯ ರೈಲ್ವೆಯ ನಿವೃತ್ತ ಕ್ರೀಡಾ ಕಲ್ಯಾಣಾಧಿಕಾರಿ ಜಾರ್ಜ್‌ ಮಾಣಿಕ್ಯಂ, ಬ್ರಹ್ಮಕುಮಾರಿ ಹುಬ್ಬಳ್ಳಿ ಉಪವಲಯದ ನಿರ್ವಾಹಕಿ ಬಿ.ಕೆ. ನಿರ್ಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.