ADVERTISEMENT

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ: ಕೃಷಿ ಸಚಿವ, ಅಧಿಕಾರಿಗಳು ಶಾಮೀಲು;ನಡಹಳ್ಳಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 7:45 IST
Last Updated 29 ಜುಲೈ 2025, 7:45 IST
<div class="paragraphs"><p>ಎ.ಎಸ್.ಪಾಟೀಲ ನಡಹಳ್ಳಿ</p></div>

ಎ.ಎಸ್.ಪಾಟೀಲ ನಡಹಳ್ಳಿ

   

ಹುಬ್ಬಳ್ಳಿ: ರಾಜ್ಯದಲ್ಲಿ 2.50 ಲಕ್ಷ ಟನ್ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದ್ದು, ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಕೃಷಿ ಸಚಿವ, ಕೃಷಿ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು‌.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ರೈತರು ರಸಗೊಬ್ಬರ ಸಿಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಎಐಸಿಸಿ ರಾಜ್ಯ ಉಸ್ತುವಾರಿಗಳೊಂದಿಗೆ ಶಾಸಕರ ಜತೆ ಸಭೆ ನಡೆಸಲು ಮುಂದಾಗಿದ್ದಾರೆ. ಇದು ಖಂಡನೀಯ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಆಯಾ ಜಿಲ್ಲೆ, ತಾಲ್ಲೂಕುಗಳಲ್ಲಿ ರೈತರಿಗೆ ಅವಶ್ಯಕತೆ ಇರುವಷ್ಟು ಗೊಬ್ಬರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು.

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಖಂಡಿಸಿ ಆಗಸ್ಟ್ ಒಂದರಂದು ಕೊಪ್ಪಳ ಬಂದ್ ಮಾಡುವ ಜತೆಗೆ, ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರಿಗೆ ರಸಗೊಬ್ಬರ ಸಿಗುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು‌.

ಎನ್.ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾಗಲು ಅರ್ಹರಲ್ಲ. ಅವರಿಗೆ ರಾಜ್ಯದ ಭೌಗೋಳಿಕತೆಯ ಬಗ್ಗೆ ಅರಿವಿಲ್ಲ. ಯಾವ ಭಾಗದಲ್ಲಿ ಎಷ್ಟು ಮಳೆಯಾಗುತ್ತದೆ, ಯಾವ ಬೆಳೆ ಬೆಳೆಯುತ್ತಾರೆ, ಯೂರಿಯಾ ಗೊಬ್ಬರದ ಅವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ಕನಿಷ್ಠ ಜ್ಞಾನ ಅವರಿಗೆ ಇಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ನೀಡಿದ ರಸಗೊಬ್ಬರವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರಿಸಮನಾಗಿ ಹಂಚಿಕೆ ಮಾಡಲಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದ ಹತ್ತು ಜಿಲ್ಲೆಗಳಿಗೆ ಅವಶ್ಯವಿರುವಷ್ಟು ಗೊಬ್ಬರ ನೀಡಿಲ್ಲ. ಇದಕ್ಕೆ ಕೃಷಿ ಸಚಿವರ ಅಜ್ಞಾನ ಕಾರಣ. ಅವಶ್ಯಕತೆ ಇಲ್ಲದಿರುವ ಜಿಲ್ಲೆಗಳಲ್ಲಿ ಶೇಖರಣೆಯಾಗಿರುವ ಯೂರಿಯಾ ಗೊಬ್ಬರವನ್ನು ಅಗತ್ಯ ಇರುವ ಜಿಲ್ಲೆಗಳ‌ ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿ ಉಳಿಯುತ್ತದೆಯೋ, ಇಲ್ಲವೋ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಹೇಳಬೇಕು. ಆದರೆ, ರೈತರಿಗೆ ಅನ್ಯಾಯವಾಗಬಾರದು, ಅವರು ಗೊಬ್ಬರ ಕೊಡಿಸಬೇಕು ಎಂಬುದಷ್ಟೇ ನಮ್ಮ‌ ಕಾಳಜಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.