ADVERTISEMENT

ವಿಧಾನ ಪರಿಷತ್‌ಗೆ ಜಕ್ಕಪ್ಪನವರ: ದಲಿತ ಚಳವಳಿಯ ಮೂಂಚೂಣಿ ನಾಯಕನಿಗೆ ಒಲಿದ ಪದವಿ

ಸತೀಶ ಬಿ.
Published 8 ಸೆಪ್ಟೆಂಬರ್ 2025, 2:58 IST
Last Updated 8 ಸೆಪ್ಟೆಂಬರ್ 2025, 2:58 IST
ಎಫ್‌.ಎಚ್‌. ಜಕ್ಕಪ್ಪನವರ
ಎಫ್‌.ಎಚ್‌. ಜಕ್ಕಪ್ಪನವರ   

ಹುಬ್ಬಳ್ಳಿ: ದಲಿತ ಚಳವಳಿಯ ಮೂಂಚೂಣಿ ನಾಯಕ, ಶಿಕ್ಷಣ ತಜ್ಞ, ಕಾಂಗ್ರೆಸ್ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರಗೆ ವಿಧಾನ ಪರಿಷತ್‌ ಸ್ಥಾನ ಒಲಿದಿದೆ.

ನಗರದ ಹೆಗ್ಗೇರಿ ನಿವಾಸಿಯಾದ ಅವರು, ಬಿ.ಎ. ಪದವೀಧರರು. 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. 2009ರಿಂದ 2017ರವರೆಗೆ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ, 2017ರಿಂದ 2021ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಎಸ್‌ಸಿ ಘಟಕದ ರಾಷ್ಟ್ರೀಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.

ಹುಬ್ಬಳ್ಳಿ– ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ರಚನೆಯಾದ ಬಳಿಕ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ADVERTISEMENT

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಡಿ 2011– 13ರಲ್ಲಿ ಅಂಬೇಡ್ಕರ್ ಫೌಂಡೇಷನ್‌ ಉಪಾಧ್ಯಕ್ಷರಾಗಿದ್ದರು. ಧಾರವಾಡದಲ್ಲಿ ಅಂಬೇಡ್ಕರ್ ಸ್ಥಾಪಿಸಿದ್ದ ಹಾಸ್ಟೆಲ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದಾರೆ.

ಡಿ.ಜಿ. ಸಾಗರ, ಕವಿ ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಪ್ರೊ. ಕೃಷ್ಣಪ್ಪ, ಭದ್ರಾವತಿ ಕೃಷ್ಣ ಅವರೊಂದಿಗೆ ಜಕ್ಕಪ್ಪನವರ ದಲಿತ ಚಳವಳಿಯಲ್ಲಿ ಸಕ್ರಿಯವಾಗಿದ್ದರು. ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು, ಅಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಆಗುತ್ತಿದ್ದ ಅನ್ಯಾಯ ಕಂಡು ಅಖಿಲ ಭಾರತ ಕೆನರಾ ಬ್ಯಾಂಕ್‌ ಪರಿಶಿಷ್ಟ ಜಾತಿ ಮತ್ತು ಪಗಂಡದ ನೌಕರರ ಸಂಘ ಸ್ಥಾಪಿಸಿದ್ದರು. 

ಕೆಎಸ್‌ಆರ್‌ಟಿಸಿ ಎಸ್‌ಸಿ– ಎಸ್‌ಟಿ ನೌಕರರ ಒಕ್ಕೂಟ, ಅಖಿಲ ಭಾರತ ಎಸ್‌ಬಿಐ ಎಸ್‌ಸಿ–ಎಸ್‌ಟಿ ನೌಕರರ ಸಂಘ, ಕೃಷಿ ವಿಶ್ವವಿದ್ಯಾಲಯ ಎಸ್‌ಸಿ– ಎಸ್‌ಟಿ ನೌಕರರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ, ಕೆನರಾ ಬ್ಯಾಂಕ್‌ ಎಸ್‌ಸಿ– ಎಸ್‌ಟಿ ನೌಕರರ ಕ್ರೆಡಿಟ್ ಕೋ. ಆಪರೇಟಿವ್‌ ಸೊಸೈಟಿ ಸ್ಥಾಪಿಸಿದ ಹೆಗ್ಗಳಿಕೆ ಅವರದ್ದು.

‘ವಿಧಾನಪರಿಷತ್‌ ಸಭಾಪತಿ ಅವರು ಸದ್ಯ ವಿದೇಶಿ ಪ್ರವಾಸಲ್ಲಿದ್ದು, ಅವರು ಮರಳಿದ ಬಳಿಕ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ’ ಎಂದು ಎಫ್‌.ಎಚ್‌. ಜಕ್ಕಪ್ಪನವರ ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಸಂಘಟನೆಗೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪ್ರಾದೇಶಿಕ ಪ್ರಾತಿನಿಧ್ಯ ಸಾಮಾಜಿಕ ನ್ಯಾಯದ ಅಡಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ
ಎಫ್‌.ಎಚ್‌. ಜಕ್ಕಪ್ಪನವರ ಕಾಂಗ್ರೆಸ್‌ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.