ADVERTISEMENT

ಸಮಸ್ಯೆ ವಿರುದ್ಧ ಹೋರಾಟಕ್ಕೆ ಸಜ್ಜಾಗಿ: ಕೋನರಡ್ಡಿ

ಕಾಂಗ್ರೆಸ್‌ನಲ್ಲಿ ವರ್ಷ ಪೂರೈಸಿದ ಕೋನರಡ್ಡಿ: ಶಕ್ತಿ ಪ್ರದರ್ಶನದ ವೇದಿಕೆಯಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 4:42 IST
Last Updated 17 ಡಿಸೆಂಬರ್ 2022, 4:42 IST
ಎನ್‌.ಎಚ್‌. ಕೋನರಡ್ಡಿ ಅವರು ಕಾಂಗ್ರೆಸ್‌ನಲ್ಲಿ ಒಂದು ವರ್ಷ ಪೂರೈಸಿದ ಅಂಗವಾಗಿ, ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಗ್ರಾಮದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಹಿರಿಯರಾದ ದ್ಯಾಮಣ್ಣ ಕೊಗ್ಗಿ ಹಾಗೂ ಗಣ್ಯರು ಉದ್ಘಾಟಿಸಿದರು
ಎನ್‌.ಎಚ್‌. ಕೋನರಡ್ಡಿ ಅವರು ಕಾಂಗ್ರೆಸ್‌ನಲ್ಲಿ ಒಂದು ವರ್ಷ ಪೂರೈಸಿದ ಅಂಗವಾಗಿ, ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರ ಗ್ರಾಮದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಹಿರಿಯರಾದ ದ್ಯಾಮಣ್ಣ ಕೊಗ್ಗಿ ಹಾಗೂ ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ನವಲಗುಂದ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸರ್ಕಾರದ ದುರಾಡಳಿತದ ವಿರುದ್ಧ ಕಾರ್ಯಕರ್ತರು ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ಎನ್.ಎಚ್. ಕೋನರಡ್ಡಿ ಹೇಳಿದರು.

ತಾವು ಕಾಂಗ್ರೆಸ್ ಪಕ್ಷ ಸೇರಿ ಒಂದು ವರ್ಷ ಪೂರೈಸಿದ ಅಂಗವಾಗಿ, ತಾಲ್ಲೂಕಿನ ಕಿರೇಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಔತಣಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೆಳೆ ಹಾನಿ ಹಾಗೂ ಮಳೆಗೆ ಬಿದ್ದ ಮನೆಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಸರ್ಕಾರ ತಮಗೆ ಬೇಕಾದವರಿಗೆ ₹5 ಲಕ್ಷ ಪರಿಹಾರ ಕೊಟ್ಟು, ಅರ್ಹರಿಗೆ ಕೇವಲ ₹50 ಸಾವಿರ ನೀಡಿ ಅನ್ಯಾಯ ಮಾಡಿದೆ’ ಎಂದರು.

‘ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆಯಡಿ ಬೆಳೆವಿಮೆ ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಆದರೆ, ಇಲ್ಲಿಯವರೆಗೆ ಪರಿಹಾರ ಬಂದಿಲ್ಲ. ಹೆಸರು ಬೆಳೆಗೆ ರೈತರು ಬೆಳೆವಿಮೆ ತುಂಬಿದ್ದರೂ, ವಿಮೆ ವ್ಯಾಪ್ತಿಯಲ್ಲಿ ಹೆಸರನ್ನು ಪರಿಗಣಿಸಲೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮಹಾದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆಗೆ ಮಹದಾಯಿ ನ್ಯಾಯಮಂಡಳಿ ಆದೇಶವಾಗಿ, ಸರ್ಕಾರ ಅಧಿಸೂಚನೆ ಹೊರಡಿಸಿದರೂ ಇಲ್ಲಿಯವರೆಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿಲ್ಲ. ಇದರ ವಿರುದ್ಧ ಪಕ್ಷದಿಂದ ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಮಾತನಾಡಿ, ‘ಕೋನರಡ್ಡಿ ಮತ್ತು ನಾನು ತಂದೆ–ಮಗನಂತಿದ್ದೇವೆ. ಪಕ್ಷದಲ್ಲಿ ಅವರ ಒಂದು ವರ್ಷದ ಪಯಣ ಕಾಂಗ್ರೆಸ್‍ಗೆ ಹೆಚ್ಚಿನ ಶಕ್ತಿ ತುಂಬಿದೆ. ನವಲಗುಂದ ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ’ ಎಂದು ಹೇಳಿದರು.

ವಿರಕ್ತಮಠ ಮುರಗಯ್ಯನವರು ಸಾನ್ನಿಧ್ಯ ವಹಿಸಿದ್ದರು. ಹಿರಿಯರಾದ ದ್ಯಾಮಣ್ಣ ಕೊಗ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಾದುಗೌಡ ಪಾಟೀಲ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾಗೌಡ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ,ಬಾಪುಗೌಡ ಪಾಟೀಲ, ಅಪ್ಪಣ್ಣ ಹಳ್ಳದ, ಬಾಬಾಜಾನ ಮುಲ್ಲಾ, ಅರುಣಕುಮಾರ ಮಜ್ಜಗಿ, ಬಸವರಾಜ ಮಲಕಾರಿ, ಆರ್.ಎಚ್. ಕೋನರಡ್ಡಿ, ಆರ್.ಎಫ್. ಕವಳಿಕಾಯಿ ಮುಂತಾದವರು ಇದ್ದರು.

ವಿವಿಧ ಗ್ರಾಮಗಳಿಂದ ಕೋನರಡ್ಡಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಕಾರ್ಯಕ್ರಮವು, ಕೋನರಡ್ಡಿ ಅವರ ಜನಬೆಂಬಲದ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಕಂಡುಬಂತು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.