ತೇರದಾಳ: ತಾಲ್ಲೂಕಿನ ತಮದಡ್ಡಿಯಲ್ಲಿ ಕೃಷ್ಣಾ ನದಿ ಪ್ರವಾಹ ಇಳಿಕೆಯಾಗದ ಕಾರಣ ಸಂತ್ರಸ್ತರ ಸಂಕಟ ಹೆಚ್ಚಾಗುತ್ತಲಿದೆ.
ಪ್ರವಾಹವು ಬೆಳೆಯನ್ನು ಆವರಿಸಿದೆ. ಮೇವು ಕೂಡ ಹಾಳಾಗಿದೆ. ಅಧಿಕಾರಿಗಳು ಮಂಗಳವಾರ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಸಿದ್ದಾರೆ. ಒಂದು ಜಾನುವಾರಿಗೆ 18 ಕೆ.ಜಿಯಂತೆ 19.1 ಮೆಟ್ರಿಕ್ ಟನ್ ಹಸಿ ಮೇವನ್ನು ವಿತರಿಸಲಾಗಿದೆ ಎಂದು ತಮದಡ್ಡಿ ನೋಡಲ್ ಆನಂದ ಕೆಸರಗೊಪ್ಪ ತಿಳಿಸಿದರು. ತೇರದಾಳ ಶಾಸಕ ಸಿದ್ದು ಸವದಿ ಉಪಸ್ಥಿತರಿದ್ದರು.
ಬುಧವಾರ ಸಂಜೆ ಮನೆಯ ಬಾಗಿಲಿಗೆ ನೀರು ಬಂದಿದ್ದರಿಂದ ಪರಿಶಿಷ್ಟ ಜಾತಿ ಕಾಲೊನಿಯ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈಗಾಗಲೇ ಕೆಲ ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ನೆಲೆಸಿದ್ದಾರೆ.
ಗ್ರಾಮದಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಜಾಕವೆಲ್‌ಗೆ ತೆರಳುವ ದಾರಿ ಜಲಾವೃತವಾಗಿದೆ. ಚೆನ್ನಾಗಿ ಬೆಳೆದಿದ್ದ 1,200 ಎಕರೆ ಬೆಳೆಗೆ ನೀರು ನುಗ್ಗಿದೆ. ಕಬ್ಬ ಬೆಳೆ ಬಿಟ್ಟು, ಉಳಿದ ಎಲ್ಲಾ ಬೆಳೆಯು ಅತಿವೃಷ್ಟಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಹಳಿಂಗಳಿ ಗ್ರಾಮದ ಮಹಾವೀರ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲೂ 120 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಜಾನುವಾರುಗಳಿಗೆ ಅಗತ್ಯ ಮೇವು ವಿತರಿಸಲಾಗುತ್ತಿದೆ ಎಂದು ಹಳಿಂಗಳಿ ನೋಡಲ್ ಅಧಿಕಾರಿ ಚೇತನ್ ಅಬ್ಬಿಗೇರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.