ADVERTISEMENT

ಹುಬ್ಬಳ್ಳಿ ಮೇಲ್ಸೇತುವೆ ಕಾಮಗಾರಿ: ‘ಈದ್ಗಾ’ ಕಾಂಪೌಂಡ್ ತೆರವಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 18:18 IST
Last Updated 13 ಜೂನ್ 2025, 18:18 IST
ಹುಬ್ಬಳ್ಳಿ ಈದ್ಗಾ ಮೈದಾನದ ತಡೆಗೋಡೆ ಒಳಗೆ ಗತಡಿನ ಶೀಟ್‌ ಅಳವಡಿಸಿ, ಒಳಗಿನ ಕಟ್ಟಡಕ್ಕೆ ರಕ್ಷಣೆ ನೀಡಲಾಗಿದೆ
ಹುಬ್ಬಳ್ಳಿ ಈದ್ಗಾ ಮೈದಾನದ ತಡೆಗೋಡೆ ಒಳಗೆ ಗತಡಿನ ಶೀಟ್‌ ಅಳವಡಿಸಿ, ಒಳಗಿನ ಕಟ್ಟಡಕ್ಕೆ ರಕ್ಷಣೆ ನೀಡಲಾಗಿದೆ   

ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಆವರಣದ ಗೋಡೆ ಭಾಗಶಃ ಭಾಗ ತೆರವು ಆಗಲಿದ್ದು, ಸ್ವಾಧೀನ ಪ್ರಕ್ರಿಯೆ ಕಾಮಗಾರಿ ಶುಕ್ರವಾರದಿಂದ ಆರಂಭವಾಗಿದೆ.

ಮೈದಾನದ ಮಧ್ಯ ಭಾಗದಲ್ಲಿರುವ ಈದ್ಗಾ ಕಟ್ಟಡದ ರಕ್ಷಣೆಗೆ, ತಡೆಗೋಡೆಯ ಸಮೀಪದ ಸುಮಾರು 10–20 ಮೀಟರ್‌ ಅಂತರದಲ್ಲಿ ತಗಡಿನ ಶೀಟ್‌ ಅಳವಡಿಸಲಾಗಿದೆ. ಚನ್ನಮ್ಮ ವೃತ್ತದಿಂದ ಕೋರ್ಟ್‌ ವೃತ್ತಕ್ಕೆ ತೆರಳುವಲ್ಲಿನ ಕಬ್ಬಿಣದ ತಡೆಗೋಡೆಯನ್ನು ಗ್ಯಾಸ್‌ ಕಟರ್‌ನಿಂದ ತುಂಡು ಮಾಡಿ ತೆರವು ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ಗುತ್ತಿಗೆ ಪಡೆದ ಝಂಡು ಕಂಪನಿಯ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಹಾಗೂ ಪೊಲೀಸ್‌ ಇಲಾಖೆಗೆ 2024ರ ಜುಲೈ 23 ರಂದೇ ಪತ್ರ ಬರೆದು ತಿಳಿಸಿದ್ದರು.

ADVERTISEMENT

ಯೋಜನೆ ಪ್ರಕಾರ ಚನ್ನಮ್ಮ ವೃತ್ತದಿಂದ ಕೋರ್ಟ್‌ ವೃತ್ತದ ಕಡೆಗೆ ಹಾಗೂ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಶೇ 10–15ರಷ್ಟು ಭಾಗ ತೆರವು ಆಗಲಿದೆ. ಮೇಲ್ಸೇತುವೆಗೆ ಕಾಮತ್‌ ಹೋಟೆಲ್‌ ಎದುರು ಬೃಹತ್‌ ಪಿಲ್ಲರ್‌ಗಳು, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್‌ ಕಂಬದ ಬಳಿ ಒಂದು ಪಿಲ್ಲರ್‌ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಉಪನಗರ ಪೊಲೀಸ್‌ ಠಾಣೆ ಕಟ್ಟಡದ ಶೇ 20ರಷ್ಟು ಭಾಗವೂ ತೆರವು ಆಗಲಿದೆ.

‘ಈದ್ಗಾ ಮೈದಾನದ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಅನುಷ್ಠಾನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್‌ ಭದ್ರತೆ ಕೇಳಿತ್ತು. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.