ADVERTISEMENT

ಹುಬ್ಬಳ್ಳಿ: ಜುಲೈನಲ್ಲಿ ವಿದ್ಯುದ್ದೀಕರಣ ರೈಲ್ವೆ ಮಾರ್ಗ ಬಳಕೆಗೆ

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 15:51 IST
Last Updated 9 ಏಪ್ರಿಲ್ 2021, 15:51 IST

ಹುಬ್ಬಳ್ಳಿ: ಕಳೆದ ವರ್ಷದಲ್ಲಿ 288 ಕಿ.ಮೀ. ರೈಲ್ವೆ ಮಾರ್ಗವನ್ನು ‌ವಿದ್ಯುದ್ದೀಕರಣ ಮಾಡಲಾಗಿದ್ದು, ಜುಲೈನಿಂದ ಬಳಕೆಗೆ ಲಭ್ಯವಾಗಲಿದೆ ಎಂದು ನೈರುತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈಲ್ವೆ ಇಲಾಖೆ ಸದಾ ಹೊಸತನಕ್ಕೆ ತುಡಿಯುತ್ತಿದೆ. ಸಚಿವಾಲಯ ಸರಕು ಹಾಗೂ ಸಾಗಣೆಗೆ ಸಾಕಷ್ಟು ರಿಯಾಯಿತಿ ನೀಡಿದ್ದು, ಹುಬ್ಬಳ್ಳಿ ವಿಭಾಗೀಯ ವ್ಯಾಪ್ತಿಯಲ್ಲಿ ಸರಕುಗಳನ್ನು ವಿದೇಶಕ್ಕೆ ರವಾನಿಸಲಾಗಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಂದ ಸಕ್ಕರೆ ರಫ್ತು ಮಾಡಲಾಗಿದ್ದು, ಮೊದಲ ಬಾರಿಗೆ ಬಾದಾಮಿಯಿಂದ ಸಕ್ಕರೆ ರವಾನಿಸಲಾಗಿದೆ’ ಎಂದರು.

‘ಮೊದಲ ಬಾರಿಗೆ ಗಂಗಾವತಿಯಿಂದ ಅಸ್ಸಾಂನ ಅಜರ್‌ ನಗರಕ್ಕೆ 1,326 ಟನ್‌ ಅಕ್ಕಿ ಸಾಗಿಸಲಾಗಿದೆ. ಈ ಮಾರ್ಗ ಕೂಡ ಸರಕು ಸಾಗಣೆಗೆ ಹೊಸ ಅವಕಾಶವಾಗಿದೆ. ಹುಬ್ಬಳ್ಳಿ ವಿಭಾಗ ಇದೇ ವರ್ಷದ ಮಾರ್ಚ್‌ನಲ್ಲಿ 3.45 ಬಿಲಿಯನ್‌ ಟನ್‌ ಸರಕು ಸಾಗಣೆ ಮಾಡಿದ್ದು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಂದೇ ತಿಂಗಳಲ್ಲಿ ಹೆಚ್ಚು ಸರಕು ಸಾಗಣೆ ಮಾಡಿದ ದಾಖಲೆ ಇದಾಗಿದೆ. ಮಾರ್ಚ್‌ 31ರಂದು ಒಂದೇ ದಿನ 2,286 ವಾಗನ್‌ಗಳಲ್ಲಿ ಸರಕು ಲೋಡ್ ಮಾಡಲಾಗಿದೆ. 2020–21ರ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಿಭಾಗವು ಒಟ್ಟು 29.949 ಮಿಲಿಯನ್‌ ಟನ್‌ ಲೋಡ್‌ ಮಾಡಿದ್ದು, ಹೋದ ವರ್ಷಕ್ಕೆ ಹೋಲಿಸಿದರೆ ಇದು ಶೇ 9.3ರಷ್ಟು ಹೆಚ್ಚು’ ಎಂದು ವಿವರಿಸಿದರು.

ADVERTISEMENT

ನಿಯಮ ಮೀರಲು ಅವಕಾಶವಿಲ್ಲ: ರೈಲುಗಳಲ್ಲಿ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಸಂಚರಿಸಲು ಯಾರಿಗೂ ಅವಕಾಶವಿಲ್ಲ ಎಂದು ಮಾಳಖೇಡ ಹೇಳಿದರು.

‘ಕೋವಿಡ್‌ ನಿಯಮ ಉಲ್ಲಂಘಿಸಿ ಒಂದೇ ಬೋಗಿಯಲ್ಲಿ ನೂರಾರು ಜನ ರೈಲು ಏರಿದ ವಿಡಿಯೊ ಶುಕ್ರವಾರ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಕೋವಿಡ್‌ ನಿಯಮ ಪಾಲನೆ ಮಾಡಲಾಗಿಲ್ಲ ಎಂದು ವಿನಾಕಾರಣ ಟೀಕಿಸಲಾಗುತ್ತಿದೆ. ಆ ವಿಡಿಯೊ ಹಳೆಯದಾಗಿದ್ದು, ಕರ್ನಾಟಕದ್ದಲ್ಲ. ವದಂತಿಗಳಿಗೆ ಯಾರೂ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.‌

‘ಪ್ರಯಾಣಿಕರಿಗೆ ಸೋಂಕಿನಿಂದ ರಕ್ಷಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಡ್ಡಯವಾಗಿ ಮಾಸ್ಕ್‌ ಧರಿಸುವಂತೆ, ಸ್ಯಾನಿಟೈಸರ್‌ ಹಚ್ಚಿಕೊಳ್ಳುವಂತೆ ಹೇಳಲಾಗುತ್ತಿದೆ. ಕೋವಿಡ್‌ ಮೊದಲ ಅಲೆ ಮತ್ತು ಲಾಕ್‌ಡೌನ್‌ ತೆರವಾದ ಬಳಿಕ ರೈಲುಗಳು ಮೊದಲಿನ ಹಾಗೆ ಭರ್ತಿಯಾಗುತ್ತಿಲ್ಲ.ಪ್ರಯಾಣಿಕರ ಬೇಡಿಕೆ ಹೆಚ್ಚು ಇದ್ದ ಮತ್ತು ಹಬ್ಬಗಳ ಸಂದರ್ಭದಲ್ಲಿ ವಿಶೇಷ ರೈಲುಗಳನ್ನೂ ಓಡಿಸಲಾಗುತ್ತಿದೆ’ ಎಂದರು.

ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ, ಹುಬ್ಬಳ್ಳಿ ವಿಭಾಗದ ಭದ್ರತಾ ವಿಭಾಗದ ಹಿರಿಯ ಮುಖ್ಯ ಆಯುಕ್ತ (ಆರ್‌ಪಿಎಫ್‌) ವಲ್ಲೇಶ್ವರ ಬಿ.ಟಿ., ವಿಭಾಗೀಯ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಅರವಿಂದ ಹೆರ್ಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.