ಹುಬ್ಬಳ್ಳಿಯ ಇಂದಿರಾಗಾಜಿನ ಮನೆ ಹಿಂಭಾಗದ ಬಾವಿಯಲ್ಲಿ ಭಾನುವಾರ ಗಣೇಶಮೂರ್ತಿ ವಿಸರ್ಜಿಸುವ ಪೂರ್ವ, ಗಣಪನಿಗೆ ವ್ಯಕ್ತಿಯೊಬ್ಬರು ನಮಸ್ಕರಿಸಿದರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ನಗರದ ಮನೆ– ಮನೆಗಳಲ್ಲಿ ಹಾಗೂ ಕೆಲವು ಸಾರ್ವಜನಿಕ ಗಣೇಶೊತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗಳನ್ನು ಐದನೇ ದಿನವಾದ ಭಾನುವಾರ ಸಂಭ್ರಮ– ಸಡಗರದಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
ಇಂದಿರಾ ಗಾಜಿನ ಮನೆ ಹಿಂಭಾಗದ ಬಾವಿ, ಹೊಸೂರು ಬಾವಿ ಸೇರಿದಂತೆ ಹಳೇಹುಬ್ಬಳ್ಳಿ, ಉಣಕಲ್, ಗೋಕುಲ ರಸ್ತೆಯ ವಿವಿಧೆಡೆಯ ಬಾವಿಗಳಲ್ಲಿ ಹಾಗೂ ವಿವಿಧ ಸಂಘಟನೆಗಳು ವ್ಯವಸ್ಥೆ ಮಾಡಿದ್ದ ನೀರಿನ ಟ್ಯಾಂಕ್‌ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ರಾತ್ರಿ 10 ಗಂಟೆ ವರೆಗೆ ಡಿ.ಜೆ ಸದ್ದು ಜೋರಾಗಿತ್ತು. ಕೆಲವರು ಭಜನೆ ಮಾಡುತ್ತ, ಜಾಂಜ್ ಮೇಳದ ಜೊತೆ ತಡರಾತ್ರಿವರೆಗೂ ಮೆರವಣಿಗೆ ನಡೆಸಿ ಮೂರ್ತಿ ವಿಸರ್ಜಿಸಿದರು.
ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗೆ ಸಂಜೆ ವೇಳೆ ವಿಶೇಷ ಪೂಜೆ ಸಲ್ಲಿಸಿ, ಕುಟುಂಬದವರು, ಅಕ್ಕಪಕ್ಕದವರು ಸೇರಿ ಪಟಾಕಿ ಸಿಡಿಸುತ್ತ, ಕುಣಿಯುತ್ತ ವಿಸರ್ಜನಾ ಮೆರವಣಿಗೆ ನಡೆಸಿದರು. ನೂತನ ಬಡಾವಣೆಗಳಲ್ಲಿಯೂ ಮೊದಲ ಬಾರಿಗೆ ಪ್ರತಿಷ್ಠಾಪಿಸಿದ್ದ ಗಣಪನನ್ನು ಅದ್ದೂರಿ ಮೆರವಣಿಗೆ ನಡೆಸಿ ಧಾರ್ಮಿಕ ವಿಧಿ– ವಿಧಾನದಿಂದ ವಿಸರ್ಜಿಸಲಾಯಿತು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಪೊಲೀಸ್ ಸಿಬ್ಬಂದಿ ಗಾಜಿನ ಮನೆ ಹಿಂಭಾಗದ ಬಾವಿಯಲ್ಲಿ ವಿಸರ್ಜಿಸಿದರು.
‘ನಗರದ ಸುಮಾರು ನಾಲ್ಕು ಲಕ್ಷಕ್ಕೂ ಮನೆಗಳಲ್ಲಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಬಹುತೇಕ ಮೂರ್ತಿಗಳನ್ನು ಭಾನುವಾರ ವಿಸರ್ಜಿಸಲಾಗಿದೆ. ಕೆಲವರು ಏಳು, ಒಂಬತ್ತನೇ ದಿನಕ್ಕೆ ವಿಸರ್ಜಿಸುತ್ತಾರೆ. 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳು ವಿಸರ್ಜನೆಯಾಗಿವೆ’ ಎಂದು ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ತೆರೆಯಲಾಗಿದ್ದ ಪಟಾಕಿ ಮಾರಾಟ ಮಳಿಗೆಗಳಲ್ಲಿ ಭಾನುವಾರ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಪಾಲಕರು ಮಕ್ಕಳನ್ನು ಕರೆದುಕೊಂಡು ಬಂದು, ಅವರಿಗಿಷ್ಟವಾದ ಪಟಾಕಿಗಳನ್ನು ಖರೀದಿಸಿದರು. ಸೆ. 6ರವರೆಗೆ ಮೈದಾನದಲ್ಲಿ ಪಟಾಕಿ ಮಾರಾಟ ನಡೆಯಲಿದೆ.
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಬಹುಮಾನ ವಿತರಣಾ ಸಮಾರಂಭವನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು
ಸಮರ್ಥ ಹಾಗೂ ಯೋಗ್ಯ ಕಲಾವಿದರ ತಂಡ ತಾರತಮ್ಯವಿಲ್ಲದೆ ಪ್ರಶಸ್ತಿಗೆ ಗಣೇಶಮೂರ್ತಿಗಳ ಆಯ್ಕೆ ಪ್ರಕ್ರಿಯೆ ನೆರವೇರಿಸಿದೆ. ಮೂರ್ತಿ ವಿಸರ್ಜನೆಗೆ ಪಾಲಿಕೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯಮೋಹನ ಲಿಂಬಿಕಾಯಿ ಅಧ್ಯಕ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ
ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ರಾಜ್ಯ ಸರ್ಕಾರವು ಅನುದಾನ ನೀಡುವ ಮೂಲ️ಕ ಪ್ರೋತ್ಸಾಹ ನೀಡಬೇಕುವೀರೇಶ ಉಂಡಿ ಉದ್ಯಮಿ
ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ನೀಡಲಾಗುವ ಬಹುಮಾನ ವಿತರಣೆ ಸಮಾರಂಭವು ನಗರದ ಮೂರುಸಾವಿರಮಠದ ಸಭಾಭವನದಲ್ಲಿ ಭಾನುವಾರ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ‘ಭಾರತದಲ್ಲಿ ಆಚರಿಸುವಷ್ಟು ಹಬ್ಬಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹಿಂದೂ ಹಬ್ಬಗಳ ಆಚರಣೆಯಲ್ಲಿ ಭಿನ್ನತೆ ವೈವಿಧ್ಯ ಇದೆ. ಹಬ್ಬಕ್ಕೆ ತಯಾರಿಸುವ ಆಹಾರ– ಪದಾರ್ಥಗಳು ಕೂಡ ವೈವಿಧ್ಯಮಯವಾಗಿದೆ’ ಎಂದರು.
‘ರಾಣಿ ಚನ್ನಮ್ಮ ಮೈದಾನದ ಗಜಾನನೋತ್ಸವ ಮಂಡಳಿ ಪ್ರಸ್ತುತ ವರ್ಷ ಎಲ್ಲರಿಗೂ ಮಾದರಿಯಾಗುವ ಹಾಗೆ ಉತ್ಸವ ಹಾಗೂ ವಿಸರ್ಜನಾ ಮೆರವಣಿಗೆ ನಡೆಸಿದೆ. ಮುಂಬೈಗೆ ಪೈಪೋಟಿ ನೀಡುವ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಉದ್ಯಮಿ ವಿ.ಎಸ್.ವಿ. ಪ್ರಸಾದ್ ಹೇಳಿದರು.
ರಮೇಶ ಮಹಾದೇವಪ್ಪನವರ ಕೀರ್ತಿ ಕುಂದಗೋಳ ಈರಣ್ಣ ನಾಯ್ಕರ ನಾಗೇಂದ್ರ ಮೆಹರವಾಡೆ ಗೌರಿ ನಾಯಕ ಸೌರಭ ಕಮ್ಮಾರ ಡಾ. ಗಂಗಾಧರಯ್ಯ ಹಿರೇಮಠ ರಾಘವೇಂದ್ರ ವದ್ದಿ ನಾಗಲಿಂಗ ಮುರಗಿ ಫಿಜಾಅಂಜುಮ್ ಬುಕ್ಕಿಟಗಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಹುಮಾನದ ತೀರ್ಪುಗಾರರನ್ನು ಸನ್ಮಾನಿಸಲಾಯಿತು. ಅಲ್ತಾಫ್ ಕಿತ್ತೂರ ಶಾಂತರಾಜ ಪೋಳ ಎಸ್.ಎಸ್. ಕಮಡೊಳ್ಳಿಶೆಟ್ಟರ್ ಸಂಗೀತಾ ಇಜಾರದ ಅನಿಲ️ ಕವಿಶೆಟ್ಟಿ ಸಂತೋಷ ಶೆಟ್ಟಿ ಅನಿತಾ ಜಡಿ ಅಮರೇಶ ಹಿಪ್ಪರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.