ADVERTISEMENT

ಧಾರವಾಡ: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಗೆ ಕಲಾತಂಡಗಳ ಮೆರಗು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:26 IST
Last Updated 30 ಆಗಸ್ಟ್ 2025, 7:26 IST
ಹುಬ್ಬಳ್ಳಿಯ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯನ್ನು ಅ‍ಪಾರ ಸಂಖ್ಯೆಯಲ್ಲಿ ಜನರು ಕಣ್ತುಂಬಿಕೊಂಡರುಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯನ್ನು ಅ‍ಪಾರ ಸಂಖ್ಯೆಯಲ್ಲಿ ಜನರು ಕಣ್ತುಂಬಿಕೊಂಡರುಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ 4ನೇ ವರ್ಷ ಪ್ರತಿಷ್ಠಾಪಿಸಿದ್ದ ಮೂರು ದಿನಗಳ ‘ಕೃಷ್ಣರೂಪಿ’ ಗಣೇಶಮೂರ್ತಿ ವಿಸರ್ಜನೆಯು ಶುಕ್ರವಾರ ಸಂಭ್ರಮ ಹಾಗೂ ಶಾಂತಿಯುತವಾಗಿ ನೆರವೇರಿತು.

ಮಧ್ಯಾಹ್ನ 1.45ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ವಿಸರ್ಜನಾ ಮೆರವಣಿಗೆ, 4.30ರವರೆಗೂ ರಾಣಿ ಚನ್ಮಮ್ಮ ವೃತ್ತದಲ್ಲಿಯೇ ಇತ್ತು. ಬಳಿಕ ವೇಗ ಪಡೆದ ಮೆರವಣಿಗೆಯು, ಆಗಾಗ ಸುರಿದ ತುಂತುರು ಮಳೆ ನಡುವೆ ನೀಲಿಜನ್ ರಸ್ತೆ, ನ್ಯೂ ಕಾಟನ್ ಮಾರ್ಕೆಟ್, ಹೊಸೂರು ವೃತ್ತವರೆಗೆ ಅದ್ದೂರಿಯಾಗಿ ಸಾಗಿತು. ಸಂಜೆ 7 ಗಂಟೆಗೆ ಹೊಸೂರು ಬಾವಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ಮೂರ್ತಿ ವಿಸರ್ಜನೆ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. 11.30ಕ್ಕೆ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಮೂರ್ತಿ ಇಟ್ಟು 11.59ಕ್ಕೆ ಮೈದಾನದಿಂದ ಹೊರತರಲಾಯಿತು.

ADVERTISEMENT

ವಿಸರ್ಜನಾ ಮಾರ್ಗದುದ್ದಕ್ಕೂ ಕಲಾತಂಡಗಳ ವಾದನದ ಸದ್ದು ಅನುರಣಿಸಿತು. ಎಲ್ಲೆಡೆ ಕೇಸರಿ ಬಾವುಟ, ಭಗವಾಧ್ವಜಗಳು ರಾರಾಜಿಸಿದವು. ಆಂಜನೇಯ, ಶ್ರೀರಾಮ, ವೀರ ಸಾವರ್ಕರ್, ವಿಶ್ವಗುರು ಬಸವಣ್ಣ, ಭಗತ್ ಸಿಂಗ್ ಚಿತ್ರ‌ ಹೊಂದಿದ್ದ ಕೇಸರಿ ಬಾವುಟಗಳನ್ನು ಹಿಡಿದು ಯುವಕರು ಕುಣಿದು ಸಂಭ್ರಮಿಸಿದರು.

ಪುರುಷರು ಶುಭ್ರ ಬಿಳಿ ಬಟ್ಟೆ, ಕೇಸರಿ ಶಾಲು ಹಾಗೂ ಮಹಿಳೆಯರು ಕೇಸರಿ ಸೀರೆ, ಶಾಲು, ಟೋಪಿ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾರ್ಗದುದ್ದಕ್ಕೂ ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಜೈಗಣೇಶ, ಜೈ ಭವಾನಿ, ಜೈ ಶಿವಾಜಿ, ಗಣಪತಿ ಬಪ್ಪ ಮೋರಿಯಾ ಘೋಷಣೆಗಳು ಝೇಂಕರಿಸಿದವು.

ಕಲಾತಂಡಗಳ ಮೆರಗು: ಈ ಬಾರಿ ಗಣೇಶೋತ್ಸವ ಮೆರವಣಿಗೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರಗು ನೀಡಿದವು. ರಾಜ್ಯದ ವಿವಿಧ ಭಾಗದ 22 ಕಲಾತಂಡಗಳು ಭಾಗವಹಿಸಿದ್ದವು.

ಕುಂಭ, ಡೊಳ್ಳು, ಯಕ್ಷಗಾನ, ಚಂಡೆ, ಶಹನಾಯಿ, ತಮಟೆ, ಕೋಲಾಟ, ಡೋಲ್ ತಾಷ, ಜಗ್ಗಲಗಿ, ಲೇಜಿಮ್, ಗೊಂಬೆ ಕುಣಿತ, ತಾಳ, ಝಾಂಜ್, ಕಥಕಳಿ ಗೊಂಬೆ, ಕಂಸಾಳೆ, ಡೋಲ್ ಬಾಜಾ ಸೇರಿದಂತೆ ಹಲವು ತಂಡಗಳು ಭಾಗವಹಿಸಿ ಕಲೆ ಪ್ರದರ್ಶಿಸಿದರು. ತಮಟೆ, ಝಾಂಜ್ ಸ್ವರ ನಾದದ ಸದ್ದಿಗೆ ಜನರು ನಿಂತಲ್ಲಿಯೇ ಹೆಜ್ಜೆ ಹಾಕಿದರು.

ಗಣೇಶ ಮೂರ್ತಿಯ ಜೊತೆಗೆ ರಾಮ, ಆಂಜನೇಯ ಮೂರ್ತಿಯನ್ನೂ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ರಾಮ, ಲಕ್ಷ್ಮಣ, ಆಂಜನೇಯ, ರಾವಣ ವೇಷಧಾರಿಗಳು ಗಮನ ಸೆಳೆದರು.

ನಗರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳು, ಹೊರಜಿಲ್ಲೆಗಳಿಂದಲೂ ಬಂದಿದ್ದ ಜನರು, ರಸ್ತೆಬದಿ, ಕಟ್ಟಡಗಳ ಮೇಲೆ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಭಕ್ತರಿಗೆ ರಾಣಿ ಚನ್ನಮ್ಮ ವೃತ್ತದಲ್ಲಿ ಗಜಾನನ ಉತ್ಸವ ಮಹಾಮಂಡಳಿಯಿಂದ ಉಪಾಹಾರ, ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾತಂಡ

ವಿಸರ್ಜನಾ ಮೆರವಣಿಗೆಗೆ ಬಿಗಿ ಭದ್ರತೆ

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕದಿಂದ ನಗರದಾದ್ಯಂತ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಮೆರವಣಿಗೆ ಮಾರ್ಗ ಮಾತ್ರವಲ್ಲದೆ ಈದ್ಗಾ ಮೈದಾನದಲ್ಲಿಯೂ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.  ಕೆಎಸ್‌ಆರ್‌ಪಿ ತುಕಡಿ ಕಮಾಂಡೊ‌‌ ಪೊಲೀಸ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್‌) ಸ್ಥಳೀಯ ಪೊಲೀಸರು ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿ ವಿಸರ್ಜನಾ ಮೆರವಣಿಗೆ ಭದ್ರತೆ ಒದಗಿಸಿದ್ದರು. ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಉಪಸ್ಥಿತರಿದ್ದರು.  ಸಾಮಾಜಿಕ ಜಾಲತಾಣ ಹಾಗೂ ದೂರವಾಣಿ ಕರೆಗಳ ಮೇಲೆ ಕಣ್ಣಿಡಲು ಮೊಬೈಲ್‌ ಕಮಾಂಡ್‌ ಸೆಂಟರ್‌ ವಾಹನವು ಚನ್ನಮ್ಮ ವೃತ್ತದಲ್ಲಿ ಕಾರ್ಯ ನಿರ್ವಹಿಸಿತು. ಮೆರವಣಿಗೆಯ ಪ್ರತಿಯೊಂದು ಸನ್ನಿವೇಶಗಳನ್ನು ಡ್ರೋನ್ ಕ್ಯಾಮೆರಾದಿಂದ ಸೆರೆ ಹಿಡೆಯಲಾಯಿತು.

ಸಂಚಾರ ದಟ್ಟಣೆ: ಜನರ ಪರದಾಟ

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸುಮಾರು ಏಳು ತಾಸು ನಡೆದ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಒಳರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ಪ್ರಯಾಣಿಕರು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಚನ್ನಮ್ಮ ವೃತ್ತಕ್ಕೆ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಹುಬ್ಬಳ್ಳಿ–ಧಾರವಾಡ ಸಂಪರ್ಕಿಸಲು ಪರ್ಯಾಯವಾಗಿ ಹೊಸೂರು ವೃತ್ತದಿಂದ ನ್ಯೂ ಕಾಟನ್‌ ಮಾರ್ಕೆಟ್‌ ದೇಶಪಾಂಡೆ ನಗರ ಪಿಂಟೋ ರಸ್ತೆ ಮುಖಾಂತರ ಸ್ಟೇಷನ್‌ ರಸ್ತೆ ಸಂಪರ್ಕಿಸಲು ಅವಕಾಶ ನೀಡಲಾಗಿತ್ತು.

ಧಾರವಾಡ ಗೋಕುಲ ರಸ್ತೆ ಮತ್ತು ಹಳೇ ಹುಬ್ಬಳ್ಳಿ ಕಡೆಯಿಂದ ಬಂದ ವಾಹನಗಳನ್ನು ಹೊಸೂರು ವೃತ್ತದಿಂದ ಗದಗ ರಸ್ತೆ ಸ್ಟೇಷನ್ ರಸ್ತೆಯಿಂದ ಬಂದ ವಾಹನಗಳನ್ನು ಪಿಂಟೋ ಸರ್ಕಲ್ ದೇಸಾಯಿ ಕ್ರಾಸ್ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇಶಪಾಂಡೆ ನಗರ ದೇಸಾಯಿ ಸರ್ಕಲ್‌ ಪಿಂಟೋ ಸರ್ಕಲ್ ಕೇಶ್ವಾಪುರ ಕಾರವಾರ ರಸ್ತೆ ಕೊಪ್ಪಿಕರ್ ರಸ್ತೆಯಲ್ಲಿ ತೀವ್ರ ಸಂಚಾರ ದ‌ಟ್ಟಣೆ ಉಂಟಾಗಿತ್ತು. ಹೊರಗಡೆಯಿಂದ ಬಂದ ವಾಹನ ಸವಾರರು ಪರ್ಯಾಯ ಮಾರ್ಗ ತಿಳಿಯದೆ ಸಮಸ್ಯೆ ಅನುಭವಿಸಿದರು. ಬಹುತೇಕ ಜನರು ನಡೆದುಕೊಂಡೇ ಬಸ್ ನಿಲ್ದಾಣ ರೈಲು ನಿಲ್ದಾಣಕ್ಕೆ ತೆರಳಿದರು.‌

ಒಂದು ತಾಸಿನೊಳಗೇ ಪೆಂಡಾಲ್ ತೆರವು

ಈದ್ಗಾ ಮೈದಾನದಿಂದ ಗಣೇಶ ಮೂರ್ತಿ ಹೊರಬರುತ್ತಿದ್ದಂತೆಯೇ ಹು–ಧಾ ಮಹಾನಗರ ಪಾಲಿಕೆಯ ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಮಿಕರು ಮೈದಾನದಲ್ಲಿದ್ದ ಗಣೇಶ ಪೆಂಡಾಲ್ ತೆರವು ಕಾರ್ಯಕ್ಕೆ ಮುಂದಾದರು. ಶುಕ್ರವಾರ ಮಧ್ಯಾಹ್ನ 12 ಗಂಟೆಯೊಳಗೆ ಈದ್ಗಾ ಮೈದಾನದಿಂದ ಗಣೇಶ ಮೂರ್ತಿ ತೆರವುಗೊಳಿಸಬೇಕು ಎಂಬ ನಿಯಮದ ಹಿನ್ನೆಲೆ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಗಣೇಶ ಮೂರ್ತಿಯನ್ನು 11.59ಕ್ಕೆ ಮೈದಾನದಿಂದ ಹೊರಗೆ ತರಲಾಯಿತು. ಮೂರ್ತಿ ಹೊರಬರುತ್ತಿದ್ದಂತೆ ಪೆಂಡಾಲ್ ಮಂಟಪ ತಗಡಿನ ಶೀಟಿನ ಚಾವಣಿಯನ್ನು ಕೇವಲ ಒಂದು ತಾಸಿನೊಳಗೆ ತೆರವು ಮಾಡಲಾಯಿತು. ಪೌರಕಾರ್ಮಿಕರು ಕೂಡ ಮೈದಾನವನ್ನು ಸ್ವಚ್ಛಗೊಳಿಸಿ ಹೂವಿನ ಮಾಲೆ ತೆಂಗಿನ ಗರಿ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಕಸ ಸಂಗ್ರಹಿಸುವ ಟ್ರ್ಯಾಕ್ಟರ್ ಮೂಲಕ ಸಾಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.