ADVERTISEMENT

ಗಣೇಶನ ಮೇಲೆ ಪ್ರವಾಹದ ಕರಿನೆರಳು

ಬಸವರಾಜ ಹವಾಲ್ದಾರ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ಸಿದ್ಧಪಡಿಸುತ್ತಿರುವುದು
ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ಸಿದ್ಧಪಡಿಸುತ್ತಿರುವುದು   

ಗಣೇಶ ಹಬ್ಬವನ್ನು ಹುಬ್ಬಳ್ಳಿ ಸೇರಿದಂತೆ ಮುಂಬೈ –ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಇಲ್ಲಿ ಪ್ರವಾಹ ಉಂಟು ಮಾಡಿದ ಅನಾಹುತಗಳು ಗಣೇಶ ಹಬ್ಬದ ಮೇಲೆ ಕರಿನೆರಳು ಬೀರಿವೆ.

ಆರು ತಿಂಗಳ ಹಿಂದೆಯೇ ಗಣೇಶ ಮೂರ್ತಿ ತಯಾರಿಸಲು ಚಾಲನೆ ನೀಡಲಾಗಿತ್ತು. ಅವುಗಳಿಗೆ ಬೇಡಿಕೆಯೂ ಉತ್ತಮವಾಗಿಯೇ ಇತ್ತು. ಹದಿನೈದು ದಿನಗಳು ಸುರಿದ ಮಳೆಯಿಂದಾಗಿ ಒಂದೆಡೆ ಮೂರ್ತಿ ತಯಾರಿಕೆಗೆ ಹಿನ್ನೆಡೆಯಾಗಿದ್ದರೆ, ಇನ್ನೊಂದೆಡೆ ಹಬ್ಬವನ್ನು ಸರಳವಾಗಿ ಆಚರಿಸುವ ಆಲೋಚನೆಯಲ್ಲೂ ನಾಗರಿಕರಿದ್ದಾರೆ. ಹೀಗಾಗಿ ದೊಡ್ಡ ಮೂರ್ತಿಗಳಿಗೆ ಬೇಡಿಕೆ ಬರುವುದೇ ಎನ್ನುವ ಆತಂಕ ತಯಾರಕರನ್ನು ಕಾಡುತ್ತಿದೆ.

ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಹುಬ್ಬಳ್ಳಿಯೊಂದರಲ್ಲಿಯೇ 450ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿಯ ಗಣೇಶನ ವೀಕ್ಷಣೆಗೆ ರಾಜ್ಯದ ವಿವಿಧೆಡೆಯಿಂದಲೂ ಭಕ್ತರು ಆಗಮಿಸುತ್ತಾರೆ.

ADVERTISEMENT

ಗಣೇಶನ ಹಬ್ಬದಿಂದಾಗಿಯೇ ಮೂರ್ತಿ ತಯಾರಕರು, ಮಾರಾಟಗಾರರು, ಆಲಂಕಾರಿಕ ವಸ್ತು ವ್ಯಾಪಾರಿಗಳು, ಪೆಂಡಾಲ್‌ನವರು, ಪಟಾಕಿ ಮಾರಾಟಗಾರರು ಸೇರಿದಂತೆ ಹಲವರಿಗೆ ಕೆಲಸ ದೊರೆಯುತ್ತಿತ್ತು. ವಹಿವಾಟು ಚುರುಕು ಪಡೆಯುತ್ತಿತ್ತು. ಹುಬ್ಬಳ್ಳಿಯೊಂದರಲ್ಲೇ ಒಂದಲ್ಲ, ಎರಡಲ್ಲ ₹ 25 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತದೆ ಎಂಬ ಲೆಕ್ಕಾಚಾರವಿದೆ. ಆದರೆ, ಅದು ಮಂಕಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಂಪೂರ್ಣವಾಗಿ ಆ ಪ್ರದೇಶದ ಭಕ್ತರು ನೀಡುವ ಚಂದಾ ಹಣದ ಮೇಲೆಯೇ ಅವಲಂಬನೆಯಾಗಿರುತ್ತದೆ. ಸತತ ಮಳೆಯಿಂದಾಗಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿರುವುದರಿಂದ ಚಂದಾ ಸಂಗ್ರಹ ಕಷ್ಟವಾಗುತ್ತಿದೆ.

‘ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹವಾಗಿರುವುದರಿಂದ ಜನರು ಅವರಿಗೆ ನೆರವಿಗೆ ವಿವಿಧ ಸಂಘಟನೆಗಳು ಚಂದಾ ಎತ್ತುತ್ತಿದ್ದಾರೆ. ದಾನಿಗಳೂ ಉದಾರ ಮನಸ್ಸಿನಿಂದ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ, ಗಣೇಶ ಹಬ್ಬಕ್ಕೆ ಮತ್ತೆ ಚಂದಾ ಕೇಳಲು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಸರಳವಾಗಿ ಹಬ್ಬ ಆಚರಿಸುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ವಿದ್ಯಾನಗರ ಗಣೇಶ ಮಂಡಳದ ಎಂ. ಅಭಿಷೇಕ

‘ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಷ್ಟೇ ಪ್ರಾಮುಖ್ಯತೆಯನ್ನು ಮಂಟಪದ ಆಲಂಕಾರಕ್ಕೂ ನೀಡಲಾಗುತ್ತದೆ. ಹಾಗಾಗಿ ಆಲಂಕಾರಿಕ ವಸ್ತುಗಳಿಗೂ ಬಹಳಷ್ಟು ಬೇಡಿಕೆ ಇರುತ್ತದೆ. ಇಲ್ಲಿಯೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ವಿವಿಧ ಬಗೆಯ ಪ್ಲಾಸ್ಟಿಕ್‌ ಹೂವಿನ, ಮುತ್ತಿನ ಹಾರಗಳು, ಪೇಟಾ, ಛತ್ರಿ, ಮೂರ್ತಿಯ ಹಿಂದುಗಡೆ ತಿರುಗುವ ಚಕ್ರಗಳು, ಲೈಟಿಂಗ್‌ ಬಳಸಲಾಗುತ್ತದೆ. ಅದ್ಧೂರಿತನಕ್ಕೆ ಕಡಿವಾಣ ಬಿದ್ದರೆ, ಸಹಜವಾಗಿ ಇವುಗಳ ವಹಿವಾಟಿನ ಮೇಲೆಯೂ ಪ್ರಭಾವ ಉಂಟಾಗಲಿದೆ.ಪ್ರವಾಹದಿಂದ ಬಹಳಷ್ಟು ಆಸ್ತಿ ನಷ್ಟವಾಗಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರಳವಾಗಿ ಹಬ್ಬವನ್ನು ಆಚರಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. 2009ರಲ್ಲಿ ಪ್ರವಾಹ ಬಂದಾಗಲೂ ಸರಳವಾಗಿಯೇ ಆಚರಿಸಲಾಗಿತ್ತು. ಮಹಾಮಂಡಳದ ಎಲ್ಲ ಸದಸ್ಯರ ಅಭಿಪ್ರಾಯ ಸಂಗ್ರಹಕ್ಕಾಗಿ ಶೀಘ್ರವೇ ಸಭೆ ಕರೆಯಲಾಗುವುದು’ ಎಂದು ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.