ADVERTISEMENT

ಖಾಲಿ ಜಾಗದಲ್ಲಿ ತ್ಯಾಜ್ಯದ ರಾಶಿ

ಎಲ್ಲೆಂದರಲ್ಲಿ ಕಸ ಎಸೆಯುವ ಮಂದಿ; ತಲೆ ಕೆಡಿಸಿಕೊಳ್ಳದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 5:23 IST
Last Updated 17 ನವೆಂಬರ್ 2019, 5:23 IST
ಹುಬ್ಬಳ್ಳಿಯ ಆದರ್ಶನಗರದ ಮೊದಲನೇ ಮುಖ್ಯರಸ್ತೆಯ ತಿರುವಿನಲ್ಲಿರುವ ಖಾಲಿ ನಿವೇಶನದಲ್ಲಿರುವ ಕಸದ ರಾಶಿಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಹುಬ್ಬಳ್ಳಿಯ ಆದರ್ಶನಗರದ ಮೊದಲನೇ ಮುಖ್ಯರಸ್ತೆಯ ತಿರುವಿನಲ್ಲಿರುವ ಖಾಲಿ ನಿವೇಶನದಲ್ಲಿರುವ ಕಸದ ರಾಶಿಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿಯಾಗುತ್ತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಖಾಲಿ ಜಾಗಗಳು ಕಸದ ತಿಪ್ಪೆಗಳಾಗಿ ಮಾರ್ಪಡುತ್ತಿವೆ. ಇದರಿಂದಾಗಿ ನಗರದ ಅಂದ ಕೆಡುತ್ತಿದ್ದು, ಹಂದಿ ಹಾಗೂ ಸೊಳ್ಳೆಯ ಹಾವಳಿಯೂ ಹೆಚ್ಚಾಗಿದೆ.

ಅಶೋಕನಗರ, ವಿಶ್ವೇಶ್ವರನಗರ, ವಿದ್ಯಾನಗರ, ರಾಜನಗರ, ಆದರ್ಶನಗರ ದೇಶಪಾಂಡೆನಗರ, ವಿದ್ಯಾನಗರ ಸೇರಿದಂತೆ ನಗರ ಸೇರಿದಂತೆ ಯಾವುದೇ ಲೇಔಟ್, ಗಲ್ಲಿ, ಓಣಿಯಲ್ಲಿ ಸುತ್ತಾಡಿದರೂ ಅಲ್ಲಿರುವ ಕೆಲ ಖಾಲಿ ಜಾಗಗಳು ಕಸ ತುಂಬಿಕೊಂಡಿರುವ ದೃಶ್ಯ ಕಣ್ಣಿಗೆ ರಾಚುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಬಾರದು ಎಂಬ ಉದ್ದೇಶದಿಂದ, ಪಾಲಿಕೆಯ ಆಟೋಟಿಪ್ಪರ್‌ಗಳು ನಿತ್ಯ ಪ್ರತಿ ವಾರ್ಡ್‌ಗಳ ಬೀದಿಗಳಿಗೆ ಬಂದು ಕಸ ಸಂಗ್ರಹಿಸುತ್ತವೆ. ಆದರೂ, ಕೆಲವರು ಅವುಗಳಿಗೆ ಕಸ ನೀಡದೆ, ಅಕ್ಕಪಕ್ಕದ ಖಾಲಿ ಜಾಗ ಅಥವಾ ನಿವೇಶನದಲ್ಲಿ ಎಸೆದು ಬರುವ ಚಾಳಿಯನ್ನು ಮುಂದುವರಿಸಿದ್ದಾರೆ.

ADVERTISEMENT

ರಾತ್ರಿ ಹೊತ್ತು ಎಸೆಯುತ್ತಾರೆ:‘ಆದರ್ಶನಗರದ ಮೊದಲನೇ ಮುಖ್ಯರಸ್ತೆಯಲ್ಲಿರುವ ಏಕೈಕ ಖಾಲಿ ನಿವೇಶನ, ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ. ವಾಹನಗಳಲ್ಲಿ ಹೋಗುವವರು ಸೇರಿದಂತೆ, ಕೆಲವರು ರಾತ್ರಿ ಇಲ್ಲಿಗೆ ಕಸವನ್ನು ತಂದು ಚೆಲ್ಲುವುದು ಸಾಮಾನ್ಯವಾಗಿದೆ. ಅದೇ ರೀತಿ, ಅಶೋಕನಗರದ ಸಂತೆ ಮೈದಾನ ಹಾಗೂ ಸೇನೆಗೆ ಸೇರಿದ ಜಾಗದಲ್ಲೂ ಕಸದ ತಿಪ್ಪೆ ನಿರ್ಮಾಣವಾಗಿದ್ದು, ಹಂದಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪಾಲಿಕೆಯವರೂ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಮಹೇಶ ನಾಯಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬೀದಿಯಲ್ಲಿ ಕಸ ಹಾಕದಂತೆ ಅಲ್ಲಲ್ಲಿ ಇಟ್ಟಿದ್ದ ಕಸದ ಕಂಟೇನರ್‌ಗಳನ್ನು ಪಾಲಿಕೆಯವರು ತೆರವು ಮಾಡಿದ್ದಾರೆ. ಆದರೂ, ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲಿದರೆ, ಅಂತಹವರಿಗೆ ಪಾಲಿಕೆ ದಂಡ ವಿಧಿಸಬೇಕು’ ಎಂದು ಆಟೊ ಚಾಲಕ ಶಿವಕುಮಾರ್ ಒತ್ತಾಯಿಸಿದರು.

176 ಆಟೊ ಟಿಪ್ಪರ್‌:‘ಪಾಲಿಕೆಯ 176 ಆಟೊ ಟಿಪ್ಪರ್‌ಗಳು ಪ್ರತಿ ವಾರ್ಡ್‌ನ ಬೀದಿಗೂ ಹೋಗಿ ಕಸ ಸಂಗ್ರಹಿಸುತ್ತಿವೆ. ಕಸದ ಪ್ರಮಾಣ ಆಧರಿಸಿ, ಕೆಲ ವಾರ್ಡ್‌ಗಳಿಗೆ ಕನಿಷ್ಠ 3ರಿಂದ 7 ಆಟೊ ಟಿಪ್ಪರ್‌ಗಳನ್ನು ನಿಯೋಜಿಸಲಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿತ್ತಿದ್ದಾರೆ’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ಹೇಳಿದರು.

‘ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲುವುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇಲ್ಲದಿದ್ದರೆ, ಕನಿಷ್ಠ ₹100ರಿಂದ ₹1 ಸಾವಿರದವರೆಗೆ ದಂಡ ವಿಧಿಸಲಾಗುವುದು. ಅದಕ್ಕೂ ಬಗ್ಗದಿದ್ದರೆ, ಎನ್‌ಜಿಟಿ ಆದೇಶ ಉಲ್ಲಂಘನೆ ಮೇರೆಗೆ, ₹25 ಸಾವಿರದವರೆಗೆ ದಂಡ ವಿಧಿಸಲಾಗುವುದು. ಪಾವತಿಸದಿದ್ದರೆ ದಂಡದ ಮೊತ್ತವನ್ನು ಕಂದಾಯ ತೆರಿಗೆಗೆ ಸೇರಿಸಿ, ವಸೂಲಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಾಗದ ಮಾಲೀಕರಿಗೆ ನೋಟಿಸ್, ದಂಡ: ‘ಖಾಸಗಿ ಜಾಗ ಅಥವಾ ನಿವೇಶನ ಕಸದ ತಿಪ್ಪೆಯಾಗಿ ಮಾರ್ಪಟ್ಟಿದ್ದರೆ, ಅದಕ್ಕೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಿ ನೋಟಿಸ್ ನೀಡಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ, ತ್ಯಾಜ್ಯದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗುವುದು’ ಎಂದು ಪರಿಸರ ಎಂಜಿನಿಯರ್ ಟಿ.ಎನ್. ಶ್ರೀಧರ್ ಹೇಳಿದರು.

‘ಜಾಗ ನೋಂದಣಿ ಸಂದರ್ಭದಲ್ಲೇ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಜಾಗವನ್ನು ಇಟ್ಟುಕೊಳ್ಳಬೇಕು. ಯಾರೂ ಕಸ ಚೆಲ್ಲದಂತೆ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಳ್ಳಬೇಕು. ಕುರುಚಲು ಕಾಡು ಬೆಳೆಯದಂತೆ ಎಚ್ಚರ ವಹಿಸಬೇಕು ಎಂಬ ಷರುತ್ತುಗಳಿರುತ್ತವೆ. ಹಾಗಾಗಿ, ಖಾಸಗಿ ಜಾಗ ತಿಪ್ಪೆಯಾಗದಂತೆ ನೋಡಿಕೊಳ್ಳುವುದು ಮಾಲೀಕರ ಜವಾಬ್ದಾರಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.