ADVERTISEMENT

ಹುಬ್ಬಳ್ಳಿ: ಅನಿಲ ಸೋರಿಕೆ ತಂದ ಆತಂಕ

ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 11:11 IST
Last Updated 20 ಜುಲೈ 2020, 11:11 IST
ಅನಿಲ ಸೋರಿಕೆಯಾದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಅಗ್ನಿನಿರೋಧಕ ಫೋಮ್ ಹಾಯಿಸಿದರು
ಅನಿಲ ಸೋರಿಕೆಯಾದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಅಗ್ನಿನಿರೋಧಕ ಫೋಮ್ ಹಾಯಿಸಿದರು   

ಹುಬ್ಬಳ್ಳಿ: ನವನಗರದ ಕರ್ನಾಟಕ ವೃತ್ತದ ರಸ್ತೆಯಲ್ಲಿ ಹಾದು ಹೋಗಿರುವ ಕೊಳವೆ ಮಾರ್ಗದಲ್ಲಿ ಸೋಮವಾರ ಅನಿಲ ಸೋರಿಕೆಯಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಕೂಡಲೇ ಅನಿಲ ಪೂರೈಕೆಯ ಕಂಟ್ರೋಲ್ ವಾಲ್ ಆಫ್‌ ಮಾಡಿದ್ದರಿಂದ, ಭಾರಿ ಅನಾಹುತ ತಪ್ಪಿತು.

ಘಟನಾ ಸ್ಥಳದ ಸುತ್ತಮುತ್ತ ಇರುವ ಸುಮಾರು 300 ಮನೆಗಳಿಗೆ ಇಂಡಿಯನ್ ಆಯಿಲ್ –ಅದಾನಿ ಗ್ಯಾಸ್‌ ಪ್ರವೈಟ್ ಲಿಮಿಟೆಡ್‌ ಕಂಪನಿಯು, ಅಡುಗೆ ಅನಿಲ ಸಂಪರ್ಕ ನೀಡಿದೆ. ಬೆಳಿಗ್ಗೆ 11.15ರ ಸುಮಾರಿಗೆ ಈ ರಸ್ತೆಯಲ್ಲಿ ಪಾಲಿಕೆಯ ಕಾರ್ಮಿಕರು ಯುಜಿಡಿ ಕಾಮಗಾರಿ ನಿಮಿತ್ತ ಗುಂಡಿ ತೋಡುತ್ತಿದ್ದರು. ಆಗ ಕೊಳವೆ ಮಾರ್ಗದಿಂದ ಅನಿಲ ಮೇಲಕ್ಕೆ ಚಿಮ್ಮತೊಡಗಿತು. ಅಪಾಯದ ಮುನ್ಸೂಚನೆ ಅರಿತ ಕಾರ್ಮಿಕರು ಜೆಸಿಬಿಯೊಂದಿಗೆ ಸ್ಥಳದಿಂದ ಕಾಲ್ಕಿತ್ತರು. ಸೋರಿಕೆಯ ತೀವ್ರತೆಗೆ ಅಕ್ಕಪಕ್ಕದವರು, ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದರು.

ಬೀಗ ಒಡೆದು ವಾಲ್ ಆಫ್ ಮಾಡಿದೆವು

ADVERTISEMENT

‘ಅನಿಲ ಸೋರಿಕೆಯಾದ ಕೂಡಲೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ತಿಳಿಸಿದೆವು.ಗ್ಯಾಸ್ ಪೂರೈಕೆ ತಕ್ಷಣ ನಿಲ್ಲಿಸುವಂತೆ ಹೇಳಲು ಪೈಪ್‌ಲೈನ್‌ನವರಿಗೆ ಕರೆ ಮಾಡಿದರೂ ಸಿಗಲಿಲ್ಲ. ಕಡೆಗೆ, ಪಂಚಾಕ್ಷರಿ ನಗರದಲ್ಲಿರುವ ಕೊಳವೆ ಮಾರ್ಗದ ನಿಯಂತ್ರಣ ಕೇಂದ್ರಕ್ಕೆ ಹೋದೆವು. ಅಲ್ಲೂ ಯಾರೂ ಇರಲಿಲ್ಲ. ವಿಧಿ ಇಲ್ಲದೆ ಕೇಂದ್ರದ ಬೀಗ ಒಡೆದು, ಅನಿಲ ಪೂರೈಕೆಯ ವಾಲ್ ಆಫ್ ಮಾಡಿದೆವು’ ಎಂದು ಸ್ಥಳೀಯರಾದ ವಿಶ್ವನಾಥ ಹಳಗುಂಡಗಿ ಮತ್ತು ಶಿವು ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋರಿಕೆಯಾದ ಸ್ಥಳಕ್ಕೆ ಹೊಂದಿಕೊಂಡಂತೆ ವಿದ್ಯುತ್ ಕಂಬವಿದೆ. ವಾಲ್ ಆಫ್ ಮಾಡುವುದು ಸ್ವಲ್ಪ ವಿಳಂಬವಾಗಿದ್ದರೂ, ಅನಾಹುತ ನಡೆಯುತ್ತಿತ್ತು. ಗ್ಯಾಸ್‌ಲೈನ್‌ನವರ ಯಡವಟ್ಟಿನಿಂದ ನಾಲ್ಕು ತಿಂಗಳ ಹಿಂದೆಯೂ ನವನಗರ ಮುಖ್ಯರಸ್ತೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗಲೇ ಸ್ಥಳೀಯರ ಮುನ್ನೆಚ್ಚರಿಕೆಯಿಂದಲೇ ಅನಾಹುತ ತಪ್ಪಿತ್ತು’ ಎಂದು ಹೇಳಿದರು.

ಅಗ್ನಿನಿರೋಧಕ ಫೋಮ್ ಸಿಂಪಡಣೆ

‘ಸ್ಥಳೀಯರ ಮಾಹಿತಿ ಮೇರೆಗೆ 11.30ರ ಸುಮಾರಿಗೆ ಘಟನಾ ಸ್ಥಳಕ್ಕೆ ತೆರಳಿದೆವು. ಕಂಟ್ರೋಲ್ ವಾಲ್ ಆಫ್‌ ಆಗಿದ್ದರೂ, ಅನಿಲ ಸೋರಿಕೆಯ ತೀವ್ರತೆ ಹಾಗೆಯೇ ಇತ್ತು. ತಕ್ಷಣ ಸ್ಥಳದಲ್ಲಿ ಅಗ್ನಿನಿರೋಧಕ ಫೋಮ್ ಸಿಂಪಡಿಸಿದೆವು. ಕೆಲ ಹೊತ್ತಿನ ಬಳಿಕ, ವಾಸನೆಯ ತೀವ್ರತೆ ತಗ್ಗಿತು. ನಾವು ಹೋಗುವುದು ಸ್ವಲ್ಪ ತಡವಾಗಿದ್ದರೂ, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ ತಿಳಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಇಂಡಿಯನ್ ಆಯಿಲ್– ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ಎಂಜಿನಿಯರ್ ಶ್ರೀಪಾದ ಕುಲಕರ್ಣಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

‘ಯುಜಿಡಿ ಕೆಲಸ ಕಾರಣವಲ್ಲ’

‘ಘಟನಾ ಸ್ಥಳದ ರಸ್ತೆಯಲ್ಲಿ ಯುಜಿಡಿ ಚೇಂಬರ್ ಬ್ಲಾಕ್ ಆಗಿ, ರಸ್ತೆ ಮೇಲೆ ಕೊಳಚೆ ಹರಿಯುತ್ತಿತ್ತು. ಹಾಗಾಗಿ, ಚೇಂಬರ್ ಬಳಿ ಜೆಸಿಬಿಯಿಂದ ಒಂದೂವರೆ ಅಡಿಯಷ್ಟು ಗುಂಡಿ ತೆಗೆಯುತ್ತಿದ್ದಂತೆ, ಅನಿಲವು ಮಣ್ಣಿನ ದೂಳಿನ ಸಮೇತ ಮೇಲಕ್ಕೆ ಚಿಮ್ಮತೊಡಗಿತು. ಜೆಸಿಬಿಯಿಂದ ಕೊಳವೆ ಮಾರ್ಗಕ್ಕೆ ಹಾನಿಯಾಗಿಲ್ಲ. ಸ್ಥಳದಲ್ಲಿ ಮುಂಚೆಯಿಂದಲೇ ಅನಿಲ ಸೋರಿಕೆಯಾಗುತ್ತಿದೆ. ಮಣ್ಣು ಸಡಿಲವಾದಾಗ ಅನಿಲ ಮೇಲಕ್ಕೆ ಚಿಮ್ಮಿದೆ. ಘಟನೆಗೆ ಅನಿಲ ಕೊಳವೆ ಮಾರ್ಗದ ನಿರ್ವಹಣೆಯ ದೋಷವೇ ಕಾರಣ’ ಎಂದು ಪಾಲಿಕೆಯ ನವನಗರದ ವಾರ್ಡ್ 23ರ ಕಿರಿಯ ಎಂಜಿನಿಯರ್ ಮಂಜುನಾಥ ದೊಡವಾಡ ಆರೋಪಿಸಿದರು.

‘ಅನಾಹುತಕ್ಕೆ ಪಾಲಿಕೆಯೇ ಕಾರಣ’

‘ಘಟನಾ ಸ್ಥಳದಲ್ಲಿ ಅನಿಲ ಕೊಳವೆ ಮಾರ್ಗವು ಒಂದೂವರೆ ಮೀಟರ್ ಕೆಳಗೆ ಹಾದು ಹೋಗಿದೆ. ಕಾಮಗಾರಿ ನಿಮಿತ್ತ ಅಗೆಯುವುದಕ್ಕೆ ಮುಂಚೆ ನಮ್ಮ ಗಮನಕ್ಕೆ ತನ್ನಿ ಎಂದು ಪಾಲಿಕೆಗೆ ಈಗಾಗಲೇ ತಿಳಿಸಿದ್ದೇವೆ. ಆದರೂ, ನಮಗೆ ತಿಳಿಸದೆ ಗುಂಡಿ ತೋಡಿದ್ದರಿಂದ ಕೊಳವೆ ಮಾರ್ಗಕ್ಕೆ ಹಾನಿಯಾಗಿ ಅನಾಹುತ ಜರುಗಿದೆ. ಘಟನೆಗೆ ಪಾಲಿಕೆಯವರ ನಿರ್ಲಕ್ಷ್ಯವೇ ಕಾರಣ’ ಎಂದು ಇಂಡಿಯನ್ ಆಯಿಲ್– ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ಎಂಜಿನಿಯರ್ ಶ್ರೀಪಾದ ಕುಲಕರ್ಣಿ ದೂರಿದರು.

***

ಅದಾನಿ ಕಂಪನಿಯವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುತ್ತಿದ್ದಾರೆ. ಇದರಿಂದಾಗಿ, ಸ್ಥಳೀಯರು ಆತಂಕದಲ್ಲಿ ಬದುಕುವಂತಾಗಿದೆ

– ಸ್ವಾಮಿ ಮಹಾಜನಶೆಟ್ಟರ, ಸ್ಥಳೀಯ ನಿವಾಸಿ

***

ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತು. ಮುಂದೆ ಹೀಗಾಗದಂತೆ ಮಹಾನಗರ ಪಾಲಿಕೆಯವರು ಮತ್ತು ಅದಾನಿ ಗ್ಯಾಸ್ ಕಂಪನಿಯವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು

– ಪ್ರದೀಪ ಪಾಟೀಲ, ಸ್ಥಳೀಯ ನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.