ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಕಲ್ಲೆ ಗ್ರಾಮದ ಮನೆಯೊಂದರಲ್ಲಿ ಬುಧವಾರ ಬೆಳಿಗ್ಗೆ ಅಡುಗೆ ಅನಿಲ ಸಿಲೆಂಡರ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮಹಾದೇವಿ ವಗೆಣ್ಣವರ (30) ಮೃತ ಮಹಿಳೆ. ಅವರ ಪತಿ ಸುರೇಶ ವಗೆಣ್ಣವರ, ಮಗ ಶ್ರೀಧರ ವಗೆಣ್ಣವರ, ಮಾವ ಚೆನ್ನಪ್ಪ ವಗೆಣ್ಣವರ ಹಾಗೂ ಅತ್ತೆ ಗಂಗವ್ವ ವಗೆಣ್ಣವರ ಗಾಯಗೊಂಡವರು. ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅನಿಲ ಸೋರಿಕೆಯಾಗಿ ಮನೆಯ ತುಂಬ ಆವರಿಸಿದೆ. ಇದು ಗೊತ್ತಾಗದ ಮಹಿಳೆಗೆ ಚಹ ಮಾಡಲೆಂದು ಒಲೆ ಹೊತ್ತಿಸಲು ಹೋದಾಗ ಅನಾಹುತ ಸಂಭವಿಸಿದೆ. ಅಕ್ಕ–ಪಕ್ಕದ ಮನೆಯವರು ಗೋಡೆ ಮತ್ತು ಚಾವಣಿ ಒಡೆದು ಜನ ಮತ್ತು ದನ ಕರುಗಳನ್ನು ರಕ್ಷಿಸಿದ್ದಾರೆ.
ಸವದತ್ತಿ, ಧಾರವಾಡ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಮನೆ ಸೇರಿದಂತೆ ದಿನ ಬಳಕೆಯ ವಸ್ತುಗಳು, ಹೊಲಿಗೆ ಯಂತ್ರ, ಇನ್ನಿತರ ಸಾಮಗ್ರಿ ಸುಟ್ಟು ಕರಕಲಾಗಿವೆ.
ಧಾರವಾಡ ತಹಶೀಲ್ದಾರ್ ಡಿ.ಎಚ್.ಹೂಗಾರ, ಗರಗ ಪಿಎಸ್ಐ ಬಿ.ಎನ್.ಸಾತನ್ನವರ, ಹುಬ್ಬಳ್ಳಿ ಅಗ್ನಿಶಾಮಕದಳದ ಸಿ.ಎಫ್.ಒ. ರವೀಪ್ರಸಾದ, ಅಮ್ಮಿನಬಾವಿ ಕಂದಾಯ ನಿರೀಕ್ಷಕ ಎಸ್.ಎಂ.ಗುರುವಡೆಯರ, ಪಿಡಿಒ ಶಕುಂತಲಾ ಭಜಂತ್ರಿ, ಗ್ರಾಮ ಆಡಳಿತಾಧಿಕಾರಿ ಕವಿತಾ ಬೆಂಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.