ADVERTISEMENT

ಸ್ತ್ರೀ, ಪುರುಷ ಸಮಾನತೆ ಸಮಸ್ಯೆ ನಮ್ಮನ್ನು ಕಾಡುತ್ತಿದೆ: ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 13:10 IST
Last Updated 22 ಅಕ್ಟೋಬರ್ 2018, 13:10 IST
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು   

ಧಾರವಾಡ: ‘ಸ್ವಾಮಿ ವಿವೇಕಾನಂದರು ಸ್ತ್ರೀ, ಪುರುಷ ಸಮಾನತೆ ಕುರಿತು150 ವರ್ಷಗಳ ಹಿಂದೆಯೇ ಮಾತನಾಡಿದ್ದರು. ಅಂದಿನಿಂದ ಇಂದಿನವರೆಗೆ ಅದೇ ಸಮಸ್ಯೆ ನಮ್ಮನ್ನು ಕಾಡುತ್ತಿದೆ’ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗಾಗಿ ಆಯೋಜಿಸಿದ್ದ, ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ತ್ರೀ ಹಾಗೂ ಪುರುಷ ಸಮಾನತೆ ಸಮಸ್ಯೆ ಅನಾದಿ ಕಾಲದಿಂದಲೂ ನಮ್ಮನ್ನು ಕಾಡುತ್ತಿದ್ದು, ದೇವಸ್ಥಾನದ ಪ್ರವೇಶಕ್ಕೂ ಇಂದು ಅದೇ ತಾರತಮ್ಯ ನಡೆದಿದೆ’ ಎಂದರು.

ADVERTISEMENT

‘ಇಡೀ ವಿಶ್ವದಲ್ಲಿ ಅಮೇರಿಕಾ ಪ್ರಭಾವಿ ರಾಷ್ಟ್ರ ಎಂದೆನಿಸಿಕೊಳ್ಳಲು ಅಲ್ಲಿನ ಹೆಣ್ಣು ಮಕ್ಕಳು ತಮಗೂ ಸರ್ಕಾರದಲ್ಲಿ ಪಾಲುಬೇಕು, ಮತ ಚಲಾಯಿಸುವ ಹಕ್ಕು ಬೇಕು ಎಂದು 150 ವರ್ಷಗಳ ಹಿಂದೆಯೇ, ಆಂದೋಲನ ನಡೆಸಿದ್ದರು. ಅದರಂತೆ ಅಲ್ಲಿನ ಸರ್ಕಾರವೂ ಕೂಡ ಅವರಿಗೆ ಸ್ವಾತಂತ್ರ್ಯ ನೀಡಿತು. ಹೀಗಾಗಿ ಅಮೇರಿಕಾ ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರವಾಗಿದೆ’ ಎಂದು ಹೇಳಿದರು.

‘ಹೆಣ್ಣು ಮಕ್ಕಳನ್ನು ದೇಶದ ಅಭಿವೃದ್ಧಿಗಾಗಿ ತೊಡಗಿಸುವ ಕಾರ್ಯವನ್ನು ವಿವೇಕಾನಂದರು ಮಾಡಿದ್ದಾರೆ. ಸಮಾನತೆ, ಜಾತಿ ಬೇಧ–ಭಾವಗಳನ್ನು ಮರೆತು ಎಲ್ಲರನ್ನು ನಾವು ತಬ್ಬಿಕೊಂಡಾಗ ಹೊಸ ಭಾರತ ಹುಟ್ಟಲು ಸಾಧ್ಯ. ವಿವೇಕಾನಂದರ ವ್ಯಕ್ತಿತ್ವವನ್ನು ದೇಶದ ಯುವ ಜನತೆಗೆ ತೋರಿಸುವುದಕ್ಕಾಗಿ ಈ ರಥಯಾತ್ರೆ ನಡೆಯುತ್ತಿದೆ’ ಎಂದರು.

‘ಅದರಂತೆ ಸಹೋದರಿ ನಿವೇದಿತಾ ಭಾರತ ದೇಶದಲ್ಲಿನ ತ್ಯಾಗ ಮನೋಭಾವವನ್ನು ಅಮೇರಿಕಾ ಹಾಗೂ ಯುರೋಪ್ ದೇಶಗಳಿಗೆ ತಿಳಿಸುತ್ತಿದ್ದರು. ವಿವೇಕಾನಂದರ ಚಿಂತನೆಗಳನ್ನು ಸಾಕಾರಗೊಳಿಸಿದವಳು ನಿವೇದಿತಾ ಅಕ್ಕ. ತಾಂತ್ರಿಕವಾಗಿ ಮುಂದುವರೆಯಬೇಕು ಎಂಬುದನ್ನು ಅಂದಿನ ಕಾಲದಲ್ಲಿ ಯುವ ಜನತೆಗೆ ಕರೆ ಕೊಟ್ಟವಳು ಅಕ್ಕ. ಅವಳ ಜೀವನವನ್ನು ಯಾವುದೇ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸದೇ ಇರುವುದು ನಮ್ಮ ದೌರ್ಭಾಗ್ಯ’ ಎಂದು ಸೂಲಿಬೆಲೆ ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸ್ವಾಮೀಜಿ ಮಾತನಾಡಿ, ‘ಇಡೀ ಮನುಕುಲ ವೃದ್ಧಿಯಾಗಬೇಕು ಎಂಬ ಕಳಕಳಿಯನ್ನು ಸ್ವಾಮಿ ವಿವೇಕಾನಂದ ಅವರು ಹೊಂದಿದ್ದರು. ಭಾರತದ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ–ವಿಚಾರಗಳ ಪ್ರತಿನಿಧಿಯಾಗಿ ಅವರು ಷಿಕಾಗೋ ಭಾಷಣದಲ್ಲಿ ಪಾಲ್ಗೊಂಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.