ADVERTISEMENT

ಮಳೆ ನೀರು ಗುಂಡಿಗೆ ಬಿದ್ದು ಬಾಲಕಿ ಸಾವು

ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಆಟವಾಡುವಾಗ ಘಟನೆ; ಇಬ್ಬರ ರಕ್ಷಿಸಿದ ಅಂಗವಿಕಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:05 IST
Last Updated 29 ಸೆಪ್ಟೆಂಬರ್ 2020, 8:05 IST
ತ್ರಿಶಾ ಯರಂಗಳಿ
ತ್ರಿಶಾ ಯರಂಗಳಿ   

ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಸೋಮವಾರ ಆಟವಾಡುತ್ತಿದ್ದ ಮೂವರು ಸಹೋದರಿಯರು ಮಳೆ ನೀರು ಹಿಂಗು ಗುಂಡಿಗೆ ಬಿದ್ದಿದ್ದು, ಆ ಪೈಕಿ ಒಬ್ಬಳು ಮೃತಪಟ್ಟಿದ್ದಾಳೆ. ಸಮಯಪ್ರಜ್ಞೆ ಮೆರೆದ ಉದ್ಯಾನದ ಭದ್ರತಾ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.

4ನೇ ತರಗತಿ ಓದುತ್ತಿದ್ದ ಗಿರಣಿಚಾಳದ ತ್ರಿಶಾ ಯರಂಗಳಿ (10) ಗುಂಡಿಗೆ ಬಲಿಯಾದ ಬಾಲಕಿ. ಹಮಾಲಿ ಕೆಲಸ ಮಾಡುವ ಪರಶುರಾಮ ಅವರ ಪುತ್ರಿಯಾದ ತ್ರಿಶಾ, ತನ್ನ ಅಕ್ಕ ಕಾವ್ಯಾ ಹಾಗೂ ತಂಗಿ ಕೃತಿಕಾ ಜತೆ ಬೆಳಿಗ್ಗೆ 9.30ರ ಸುಮಾರಿಗೆ ಉದ್ಯಾನಕ್ಕೆ ಆಟವಾಡಲು ಬಂದಿದ್ದಳು.

ಗುಂಡಿ ಬಳಿ ಆಟವಾಡುವಾಗ ಮೂವರೂ ಬಾಲಕಿಯರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದೇ ವೇಳೆ, ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಸುರೇಶ ಹೊರಕೇರಿ, ತಕ್ಷಣ ನೀರಿಗೆ ಜಿಗಿದು ಇಬ್ಬರನ್ನು ರಕ್ಷಿಸಿದ್ದಾರೆ. ತ್ರಿಶಾಳನ್ನು ರಕ್ಷಿಸುವ ಹೊತ್ತಿಗೆ ಆಕೆ, ನೀರಿನಲ್ಲಿ ಮುಳುಗಿದ್ದಳು ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು, ತ್ರಿಶಾಗಳನ್ನು ನೀರಿನಿಂದ ಮೇಲಕ್ಕೆತ್ತಿ ಕಿಮ್ಸ್‌ಗೆ ಕರೆದೊಯ್ದರು. ಆದರೆ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು ಎಂದು ಹೇಳಿದರು.

ಜೀವ ಉಳಿಸಿದ ಅಂಗವಿಕಲ: ನೀರಿಗೆ ಬಿದ್ದಿದ್ದ ಮೂವರ ಪೈಕಿ, ಇಬ್ಬರನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ ಸುರೇಶ ಹೊರಕೇರಿ ಅಂಗವಿಕಲರಾಗಿದ್ದಾರೆ. ಸ್ಮಾರ್ಟ್‌ ಸಿಟಿ ಕಂಪನಿ ಭದ್ರತಾ ಸಿಬ್ಬಂದಿಯಾಗಿ ಉದ್ಯಾನದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

‘ಕರ್ತವ್ಯ ಮುಗಿಸಿ ಬೆಳಿಗ್ಗೆ 9.45ರ ಸುಮಾರಿಗೆ ಉದ್ಯಾನದೊಳಗೆ ಸುತ್ತಾಡಿಕೊಂಡು ಬರಲು ಹೋದೆ. ಆಗ ಮೂವರು ಬಾಲಕಿಯರು ಗುಂಡಿಗೆ ಬಿದ್ದಿದ್ದರು. ಅವರ ತಲೆ ಮತ್ತು ಕೈ ಮಾತ್ರ ಕಾಣುತ್ತಿತ್ತು. ಈಜು ಬಾರದಿದ್ದರೂ ಧೈರ್ಯ ಮಾಡಿ ತಕ್ಷಣ ಗುಂಡಿಗೆ ಜಿಗಿದೆ. ಇಬ್ಬರು ಬಾಲಕಿಯರನ್ನು ನೀರಿನಿಂದ ಮೇಲಕ್ಕೆತ್ತಿದೆ. ಅಷ್ಟರೊಳಗೆ ತ್ರಿಶಾ ಮುಳುಗಿ, ನೀರಿನಾಳಕ್ಕೆ ಹೋಗಿದ್ದಳು. ಎಷ್ಟು ಹುಡುಕಿದರೂ ಸಿಗಲಿಲ್ಲ’ ಎಂದು ಸುರೇಶ ಹೊರಕೇರಿ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಷ್ಟೊತ್ತಿಗಾಗಲೇ ಇಬ್ಬರು ಬಾಲಕಿಯರು ಉದ್ಯಾನದಲ್ಲಿದ್ದ ಕೆಲವರಿಗೆ ವಿಷಯ ತಿಳಿಸಿದರು. ಆಗ, ಈಜು ಗೊತ್ತಿದ್ದ ಕೆಲ ಸ್ಥಳೀಯರು ಬಂದು ತ್ರಿಶಾಳನ್ನು ಮೇಲಕ್ಕೆತ್ತಿ, ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರೊಳಗೆ ಆಕೆ ಕೊನೆಯುಸಿರೆಳೆದಿದ್ದಳು’ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ವಿರುದ್ಧ ಆಕ್ರೋಶ; ಪರಿಹಾರಕ್ಕೆ ಆಗ್ರಹ
ಬಾಲಕಿಯ ಸಾವಿಗೆ‘ಸ್ಮಾರ್ಟ್ ಸಿಟಿ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

‘ಅಪಾಯಕಾರಿಯಾದ ಮಳೆ ನೀರು ಹಿಂಗು ಗುಂಡಿ ಬಳಿ ಯಾರೂ ಹೋಗದಂತೆ, ತಡೆಗೋಡೆ ಅಥವಾ ಬೇಲಿ ನಿರ್ಮಿಸಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುಂಡಿಗೆ ಬಾಲಕಿ ಬಲಿಯಾಗಿದ್ದಾಳೆ. ಹಾಗಾಗಿ, ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಪ್ರತಿಭಟನೆ ನಡೆಸಲಾಗುವುದು’ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.