ADVERTISEMENT

ಮಸೀದಿ, ದರ್ಗಾಕ್ಕಿಂತ ಶಿಕ್ಷಣಕ್ಕೆ ಒತ್ತು ನೀಡಿ

ಸನಾ‌ ಮಳಗಿ ಹಾಸ್ಟೆಲ್, ಶೈಕ್ಷಣಿಕ ಕೇಂದ್ರ ಉದ್ಘಾಟನೆ: ಧರ್ಮಗುರು ಹಾಶ್ಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:01 IST
Last Updated 7 ಫೆಬ್ರುವರಿ 2023, 5:01 IST
ಹುಬ್ಬಳ್ಳಿಯ ಭೈರಿದೇವರಕೊಪ್ಪದ ಶಾಂತಿನಿಕೇತನದಲ್ಲಿ ಭಾನುವಾರ ಸನಾ‌ ಮಳಗಿ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಸ್ಥೆಯನ್ನು ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯ ಭೈರಿದೇವರಕೊಪ್ಪದ ಶಾಂತಿನಿಕೇತನದಲ್ಲಿ ಭಾನುವಾರ ಸನಾ‌ ಮಳಗಿ ಹಾಸ್ಟೆಲ್ ಮತ್ತು ಶೈಕ್ಷಣಿಕ ಸಂಸ್ಥೆಯನ್ನು ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ಮುಸ್ಲಿಮರು ಮಸೀದಿ, ಮದರಸಾ, ದರ್ಗಾ ನಿರ್ಮಾಣಕ್ಕಿಂತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ’ ಎಂದು ಧರ್ಮಗುರು ಹಜರತ್ ಸಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಸಲಹೆ ನೀಡಿದರು.

ನಗರದ ಭೈರಿದೇವರಕೊಪ್ಪದ ಶಾಂತಿನಿಕೇತನದಲ್ಲಿ ಭಾನುವಾರ ಸನಾ‌ ಮೊಹಮ್ಮದ್ ಹುಸೇನ್ ಮಳಗಿ ಫೌಂಡೇಷನ್ ಮತ್ತು ಸನಾ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್‌ ನಿರ್ಮಿಸಿರುವ ಸನಾ‌ ಮಳಗಿ ಹಾಸ್ಟೆಲ್ ಮತ್ತು ಶೈಕ್ಷಣಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಚಾರ್ ವರದಿ ಪ್ರಕಾರ, ದೇಶದ ಮುಸ್ಲಿಮರು ಎಸ್‌ಸಿ ಮತ್ತು ಎಸ್‌ಟಿಯವರಿಗಿಂತಲೂ ಹಿಂದುಳಿದಿ
ದ್ದಾರೆ. ಒಂದು ಕಾಲದಲ್ಲಿ ಶಿಕ್ಷಣ, ವಿಜ್ಞಾನ, ಸಂಶೋಧನೆ ಸೇರಿದಂತೆ ಇತರ ಕ್ಷೇತ್ರಗಳಿಗೆ ಸಮುದಾಯದ ಕೊಡುಗೆ ಅಪಾರವಾಗಿತ್ತು. ಅದನ್ನು ಮತ್ತೆ ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದರು.

ADVERTISEMENT

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ. ಹೆಣ್ಣು ಶಿಕ್ಷಿತಳಾದರೆ, ಇಡೀ ಕುಟುಂಬವೇ ಶಿಕ್ಷಿತವಾದಂತೆ. 1995ರಲ್ಲಿ ಕಲಬುರಗಿಯಲ್ಲಿ ನಾನು ಬಾಲಕಿಯರ ವಸತಿ ಶಾಲೆ ಆರಂಭಿಸಿದೆ. ಅದರ ಫಲವಾಗಿ ಇಂದು ಪ್ರತಿ ಮನೆಯಲ್ಲಿ ಎರಡ್ಮೂರು ಮಂದಿ ಪದವೀಧರರಾಗಿದ್ದಾರೆ’ ಎಂದು ಹೇಳಿದರು.

ದರ್ಗಾಗೆ ₹10 ಲಕ್ಷ ದೇಣಿಗೆ: ಭೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ದರ್ಗಾ ಮತ್ತು ಮಸೀದಿಯ ಪುನರ್‌ ನಿರ್ಮಾಣಕ್ಕಾಗಿ, ಇಬ್ರಾಹಿಂ ಅವರು ದೇಣಿಗೆಯಾಗಿ ₹10 ಲಕ್ಷದ ಚೆಕ್ ನೀಡಿದರು.

ಶಾಸಕ ಅರವಿಂದ ಬೆಲ್ಲದ, ‘ನಾವು ಎಲ್ಲಿ ಬದುಕುತ್ತೇವೋ ಅಲ್ಲಿನ ಭಾಷೆ ಕಲಿಯಬೇಕು. ಭಾಷೆ ಧರ್ಮಾತೀತವಾದುದು. ಧರ್ಮದ ಕಾರಣಕ್ಕೆ ಭಾಷೆ ವಿರೋಧಿಸಿದರೆ, ಅದು ನಮ್ಮ ಸಣ್ಣತನವನ್ನು ತೋರಿಸಿದಂತಾಗುತ್ತದೆ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ‘ಸಾಚಾರ್ ಆಯೋಗದ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಟ್ರಸ್ಟ್‌ನ ವಿಶೇಷ ಮಕ್ಕಳ ಶಾಲೆಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಲೇಖಕ ಜಿ.ಎನ್‌. ದೇವಿ, ‘ರಾಷ್ಟ್ರ ಮತ್ತು ರಾಜ್ಯದಲ್ಲಿ ಇಸ್ಲಾಂ ವಿರೋಧಿ ನೀತಿಗಳು ಜಾರಿಯಾಗುತ್ತಿರುವ ಈ ಹೊತ್ತಿನಲ್ಲಿ, ಮಳಗಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ದೂರದೃಷ್ಟಿಯುಳ್ಳದ್ದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಎ.ಎಂ.‌ ಹಿಂಡಸಗೇರಿ, ಎಸ್.ಎಸ್.‌ ಶೆಟ್ಟರ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಕೃಷಿ ಉಪಕರಣಗಳ ಸಂಶೋಧಕ ಎಂ.ಕೆ.‌ ನಡಕಟ್ಟಿನ, ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಖಾಲೀದ್ ಮಳಗಿ, ಅಶ್ರಫ್ ಅಲಿ ಬಶೀರ್ ಅಹ್ಮದ್, ಮೌಲಾನಾ ಆಜಾದ್ ಸಿರಾನ, ಇಸ್ಮಾಯಿಲ್ ಖಾಲಿಗುಡ್ಡೆ, ಮೊಹಮ್ಮದ್ ತೌಸಿಫ್, ಅಬ್ದುಲ್ ಖಾದರ್, ಮುಫ್ತಿ‌ ‌ಮೊಹಮ್ಮದ್ ಅಲಿಖಾಜಿ ಇದ್ದರು.

‘ವರ್ಷಕ್ಕೊಂದು ಶಿಕ್ಷಣ ಸಂಸ್ಥೆ ಆರಂಭ’

‘ಸಮಾಜದ ಅಭಿವೃದ್ಧಿಗಾಗಿ‌ ನಾನು ಕೆಲಸ ಮಾಡುತ್ತಾ ಬಂದಿದ್ದೇನೆ. ಬಡ, ಅಂಗವಿಕಲ ಹಾಗೂ ವಿಶೇಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮುಂದೆ ಬಾಲಕರ ಹಾಸ್ಟೆಲ್ ನಿರ್ಮಿಸುವ ಜೊತೆಗೆ, ವರ್ಷಕ್ಕೊಂದು ಶೈಕ್ಷಣಿಕ ಸಂಸ್ಥೆ ಆರಂಭಿಸಲಾಗುವುದು’ ಎಂದು ಸನಾ‌ ಮೊಹಮ್ಮದ್ ಹುಸೇನ್ ಮಳಗಿ ಫೌಂಡೇಷನ್ ಅಧ್ಯಕ್ಷ ಎಂ.ಎಂ.‌ ಮಳಗಿ ಹೇಳಿದರು.

‘ನೂತನ ಹಾಸ್ಟೆಲ್‌ನಲ್ಲಿ ಶೇ 25ರಷ್ಟು ಸೀಟುಗಳು ಬಡವರು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಉಳಿದ ಶೇ 25ರಷ್ಟು ಸೀಟುಗಳು ಅಂಗವಿಕಲರು, ವಿಶೇಷ ಮಕ್ಕಳಿಗೆ ‌ಉಚಿತವಾಗಿ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.