ಹುಬ್ಬಳ್ಳಿ: ‘ಸಂವಿಧಾನ ನೀಡಿದ ಹಕ್ಕು, ಜವಾಬ್ದಾರಿಗಳನ್ನು ನಿರ್ವಹಿಸುವ ಬದಲು ರಾಜ್ಯಪಾಲರು ಸಣ್ಣಪುಟ್ಟ ವಿಷಯಕ್ಕೂ ಸರ್ಕಾರಕ್ಕೆ ಪತ್ರ ಬರೆದು, ಅನಗತ್ಯ ಕಿರುಕುಳ ನೀಡಬಾರದು. ರಾಜಕೀಯ ಉದ್ದೇಶವನ್ನು ಬದಿಗಿರಿಸಿ, ಸಂವಿಧಾನದ ಮೌಲ್ಯಗಳನ್ನು ಅವರು ಎತ್ತಿ ಹಿಡಿಯಬೇಕು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
‘ರಾಜ್ಯಪಾಲರು ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದರೆ, ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಅನುಸಾರವೇ ಅಧಿಕಾರಿಗಳು ಉತ್ತರಿಸಬೇಕು. ಕೆಲ ಸಂದರ್ಭಗಳಲ್ಲಿ ಉತ್ತರ ನೀಡಲು ಅಧಿಕಾರಿಗಳಿಗೆ ಸಮಸ್ಯೆ ಆಗುವ ಕಾರಣ ಹೀಗೆ ನಿರ್ಧರಿಸಲಾಗಿದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಸೂಕ್ತ’ ಎಂಬ ಕಾಂಗ್ರೆಸ್ ಮುಖಂಡ ಕೆ.ಬಿ. ಕೋಳಿವಾಡ ಅವರ ಹೇಳಿಕೆಗೆ, ‘ಅವರು ಈಗ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿಲ್ಲ. ಅವರು ಸುಮ್ಮನೆ ಹೇಳಿಕೆ ಕೊಟ್ಟಿದ್ದಕ್ಕೆಲ್ಲ ಪ್ರತಿಕ್ರಿಯಿಸಲು ಆಗದು’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ, ಜಮ್ಮು–ಕಾಶ್ಮೀರದಲ್ಲಿ ಕರ್ನಾಟಕದ ವಿಚಾರವನ್ನು ಎತ್ತಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅದು ಎಲ್ಲಿಯೂ ಫಲ ನೀಡುವುದಿಲ್ಲ. ಚುನಾವಣೆ ಬಂದಾಗ ಸುಳ್ಳು ಹೇಳುವುದೇ ಮೋದಿ, ಅಮಿತ್ ಶಾ ಕೆಲಸ’ ಎಂದು ಟೀಕಿಸಿದರು.
‘ಎಚ್.ಡಿ.ಕುಮಾರಸ್ವಾಮಿ ಅವರ ಬಾಮೈದನಿಗೆ ಬಿ.ಎಸ್. ಯಡಿಯೂರಪ್ಪ ಅವರು ಭೂಮಿ ಡಿನೋಟಿಫೈ ಮಾಡಿಕೊಟ್ಟ ಕುರಿತು ಎಲ್ಲ ದಾಖಲೆಗಳಿವೆ. ಲೋಕಾಯುಕ್ತ ತನಿಖೆ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.