ADVERTISEMENT

ಜಿಂದಾಲ್‌ಗೆ ಜಮೀನು ನೀಡಿದರೆ ಹೋರಾಟ: ಎಸ್.ಆರ್. ಹಿರೇಮಠ

​ಪ್ರಜಾವಾಣಿ ವಾರ್ತೆ
Published 31 ಮೇ 2019, 11:15 IST
Last Updated 31 ಮೇ 2019, 11:15 IST
   

ಹುಬ್ಬಳ್ಳಿ: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ನೀಡುವ ಜನ ವಿರೋಧಿ ನಿರ್ಣಯವನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು, ಇಲ್ಲವಾದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ₹1.22 ಲಕ್ಷಕ್ಕೆ ಒಂದು ಎಕರೆ ಜಮೀನು ನೀಡುವ ನಿರ್ಧಾರ ಆತಂಕಕಾರಿಯಾದದ್ದು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತದೆ. ಜಿಂದಾಲ್ ಸಂಸ್ಥೆ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ವಸೂಲಿ ಮಾಡಲು ಮೊದಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಮಂಡಿಸುವ ಸಂಪುಟ ಟಿಪ್ಪಣಿಯನ್ನು (ಕ್ಯಾಬಿನೆಟ್ ನೋಟ್) ಗಮನಿಸಿದ್ದೇನೆ. ಅದರಲ್ಲಿ ವಾಸ್ತವ ಅಂಶಗಳನ್ನು ಮರೆಮಾಚಲಾಗಿದೆ. ಅಡ್ವೋಕೇಟ್ ಜನರಲ್ ಅವರೂ ಜಿಂದಾಲ್‌ಗೆ ಅನುಕೂಲವಾಗುವ ರೀತಿ ಅವಾಸ್ತವಿಕ ನೆಲೆಯಲ್ಲಿ ಸಲಹೆ ನೀಡಿದ್ದಾರೆ ಎಂದು ದೂರಿದರು.

ADVERTISEMENT

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್‌.ಕೆ. ಪಾಟೀಲ ಅವರು ಸರ್ಕಾರಕ್ಕೆ ಪತ್ರ ಬರೆದು ಜಮೀನು ನೀಡದಂತೆ ಒತ್ತಾಯಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಚಿಸಿದ್ದ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿ ಸಹ ಅವರು ಕೆಲಸ ಮಾಡಿದ್ದರು. ಅವರು ಪ್ರಸ್ತಾ‍‍ಪಿಸಿರುವ ವಿಷಯಗನ್ನು ಪರಿಗಣಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.