ADVERTISEMENT

ವಿದ್ಯಾರ್ಥಿಯರ ನೆಚ್ಚಿನ ‘ಹಸಿರು ಶಾಲೆ’

ಹಸಿರು ವಾತಾವರಣದ ನಡುವೆ ಕಂಗೊಳಿಸುವ ಕಸ್ತೂರಬಾ ಬಾಲಿಕಾ ವಸತಿ ವಿದ್ಯಾಲಯ

ರಾಜಶೇಖರ ಸುಣಗಾರ
Published 18 ಮಾರ್ಚ್ 2022, 4:05 IST
Last Updated 18 ಮಾರ್ಚ್ 2022, 4:05 IST
ಪ್ರಕೃತಿ ಸೊಬಗಿನ ಮಡಿಲಲ್ಲಿ ಅಳ್ನಾವರದ ಕಸ್ತೂರಬಾ ಬಾಲಿಕಾ ವಸತಿ ವಿದ್ಯಾಲಯ
ಪ್ರಕೃತಿ ಸೊಬಗಿನ ಮಡಿಲಲ್ಲಿ ಅಳ್ನಾವರದ ಕಸ್ತೂರಬಾ ಬಾಲಿಕಾ ವಸತಿ ವಿದ್ಯಾಲಯ   

ಅಳ್ನಾವರ: ಮಲೆನಾಡಿನ ಪ್ರಕೃತಿ ಸೊಬಗಿನ ಮಡಿಲಲ್ಲಿರುವ ಇಲ್ಲಿನಕಸ್ತೂರಬಾ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಮನಸ್ಸಿಗೆ ಮುದ ನೀಡುವ ಹಸರಿನ ನಡುವೆ, ಶಿಕ್ಷಣ, ವೃತ್ತಿ ಕೌಶಲಗಳ ಜತೆಗೆ ಆಟೋಟಗಳ ಪಾಠವನ್ನೂ ಹೇಳಿಕೊಡಲಾಗುತ್ತಿದೆ.

ಶಾಲೆ ಬಿಟ್ಟ ವಿದ್ಯಾರ್ಥಿನಿಯರನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಈ ಶಾಲೆ ಆರಂಭವಾಗಿದೆ. ಬಾಲ್ಯಾವಸ್ಥೆಯಲ್ಲೇ ಹಲವು ಮೌಲ್ಯಗಳನ್ನು ಬಿತ್ತಿ ಉಜ್ವಲ ಭವಿಷ್ಯಕ್ಕೆ ಪೀಠಿಕೆ ಹಾಕಲಾಗುತ್ತಿದೆ.

‘ಒಟ್ಟು 8 ಗುಂಪುಗಳನ್ನು ರಚಿಸಿ, ಆ ಮಕ್ಕಳಿಗೆ ಒಬ್ಬ ಮಾರ್ಗದರ್ಶಕ ಶಿಕ್ಷಕರನ್ನು ನೇಮಿಸಲಾಗಿದೆ. ಆ ಗುಂಪುಗಳಿಗೆ ನದಿಗಳ ಹೆಸರನ್ನು ಇಡಲಾಗಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂನಮ್ಮಸಂಸ್ಕೃತಿಯ ಅರ್ಥ ಬಿತ್ತುವ ಗುರಿ ನಮ್ಮದು’ ಎಂದು ಮುಖ್ಯ ಶಿಕ್ಷಕಿ ದೀಪಾ ಲಾಡ್ ಹೇಳುತ್ತಾರೆ.

ADVERTISEMENT

ವಿಶಾಲವಾದ ಶಾಲಾ ಆವರಣದಲ್ಲಿ ಶಾಲೆ, ಊಟದ ಕೊಠಡಿ ಹಾಗೂ ವಸತಿಗೃಹ ಇದೆ. ಪಟ್ಟಣದ ಹೊರ ವಲಯದಲ್ಲಿರುವ ಈ ಪರಿಸರ ಸದಾ ಹಸಿರಿನಿಂದ ಕಂಗೊಳಿಸಿ ಆಕರ್ಷಿಸುತ್ತಿದೆ. ಕೋವಿಡ್ ಕಾಲದಲ್ಲಿ ಈ ಪರಿಸರದಲ್ಲಿ ಕೋವಿಡ್ ಕಾಳಜಿ ಕೇಂದ್ರ ತೆರೆದು ಆರೈಕೆ ನೀಡಲಾಗಿತ್ತು.

‘ವಿಜ್ಞಾನ, ಕಂಪ್ಯೂಟರ್, ಕೃಷಿ, ಕಸೂತಿ ತಯಾರಿಕೆ ಬಗ್ಗೆಯೂ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಶಾಲಾ ಆವರಣದಲ್ಲಿ ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಈ ಎಲ್ಲದರ ಪರಿಣಾಮ ಇದಕ್ಕೆ ‘ಹಸಿರು ಶಾಲೆ’ ಎಂಬ ಪ್ರಶಸ್ತಿಯೂ ಲಭಿಸಿದೆ.ಇಲ್ಲಿನ ಕ್ರೀಡಾಪಟು ಪೂಜಾ ಬಾಗೇವಾಡಿ ರಾಜ್ಯ ಮಟ್ಟದಲ್ಲಿ ತನ್ನ ಪ್ರತಿಭೆ ತೋರಿದ್ದಾಳೆ. ಮಕ್ಕಳಲ್ಲಿ ಶಿಸ್ತು ಮೂಡಿಸಲು ಸ್ಕೌಟ್ಸ್ ಮತ್ತು ಗೈಡ್ಸ್ಹಾಗೂ ಸೇವಾ ದಳ ಕಾರ್ಯ ನಿರ್ವಹಿಸುತ್ತಿದೆ.

‘ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ ಮಕ್ಕಳಿಗೆ ವಿಜ್ಞಾನ ಕಲಿಕೆ ಆಸಕ್ತಿ ಮೂಡಿಸುವ ಕೆಲಸ ಮಾಡಿದೆ.ಶಿಕ್ಷಣದ ಜತೆಗೆ ನಾಯಕತ್ವ ಗುಣ, ಮಾತನಾಡುವ ಕಲೆ ಮೂಲಕ ನಮಗೆ ಬಾಹ್ಯ ಬದುಕಿನ ಎಲ್ಲ ಕೌಶಲಗಳನ್ನು ತಿಳಿಸಲಾಗುತ್ತಿದೆ, ಕರಾಟೆ ಕಲೆಯನ್ನು ಹೇಳಿ ಕೊಡಲಾಗುತ್ತಿದೆ’ ಎಂದುವಿದ್ಯಾರ್ಥಿನಿ ಭಾಗ್ಯಶ್ರೀ ತೋರವತ್ ತಿಳಿಸಿದರು.

‘ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರ ನಡುವೆ ಭಾವನಾತ್ಮಕ ಬಾಂಧವ್ಯ ಇಟ್ಟುಕೊಳ್ಳಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣಕಲ್ಪಿಸಲಾಗಿದೆ. ಮಾನಸಿಕ, ದೈಹಿಕ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಇಲ್ಲಿನ ಶಿಕ್ಷಕಿ ಮೀನಾಕ್ಷಿ ಹಿರೇಮಠ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಪ್ರೀತಿ ಕೇದಾರ್ಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.