ADVERTISEMENT

ಹುಬ್ಬಳ್ಳಿ | ಶೇಂಗಾ: ಆವಕ ಹೆಚ್ಚಳ, ಗುಣಮಟ್ಟ ಕುಸಿತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:15 IST
Last Updated 1 ನವೆಂಬರ್ 2025, 5:15 IST
ಹುಬ್ಬಳ್ಳಿಯ ಎಪಿಎಂಸಿಯ ಆವರಣದ ಕಾಳುಕಡಿ ವಿಭಾಗದ ರಸ್ತೆಗಳಲ್ಲಿ ಶೇಂಗಾ ರಾಶಿಗಳನ್ನು ಹಾಕಿರುವುದು
ಹುಬ್ಬಳ್ಳಿಯ ಎಪಿಎಂಸಿಯ ಆವರಣದ ಕಾಳುಕಡಿ ವಿಭಾಗದ ರಸ್ತೆಗಳಲ್ಲಿ ಶೇಂಗಾ ರಾಶಿಗಳನ್ನು ಹಾಕಿರುವುದು   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಂಗಾರಿನಲ್ಲಿ ಸುರಿದ ನಿರಂತರ ಮಳೆ ಮಧ್ಯೆಯೂ ಶೇಂಗಾ ಬೆಳೆದು ಕಾಪಾಡಿಕೊಂಡು ಬಂದಿದ್ದ ಜಿಲ್ಲೆಯ ರೈತರು ಶೇಂಗಾವನ್ನು ಮಾರಾಟ ಮಾಡಲು ನಗರದ ಅಮರಗೋಳದ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಬೆಲೆ ಕುಸಿತವಾಗಿದ್ದು, ಬೆಳೆಗೆ ಖರ್ಚು ಮಾಡಿದ ಹಣವೂ ಅವರ ಕೈಗೆ ಸಿಗುತ್ತಿಲ್ಲ!

ಇಲ್ಲಿನ ಎಪಿಎಂಸಿಯ ಆವರಣದ ಕಾಳುಕಡಿ ವಿಭಾಗದ ಮಳಿಗೆಗಳ ರಸ್ತೆಗಳಲ್ಲಿ ಸಾಲು ಸಾಲು ಶೇಂಗಾ ರಾಶಿಗಳನ್ನು ಹಾಕಲಾಗಿದೆ. ಶೇಂಗಾ ಸ್ವಚ್ಛತೆ ಹಾಗೂ ಕಾಳಿನ ಗುಣಮಟ್ಟದ ಆಧಾರದ ಮೇಲೆ ದರವನ್ನು ನಿಗದಿ ಮಾಡಲಾಗುತ್ತಿದೆ. 

ಸೆಪ್ಟೆಂಬರ್‌ ಆರಂಭದಿಂದಲೇ ಮುಂಗಾರಿನ ಹಂಗಾಮಿನ ಶೇಂಗಾ ಆವಕ ಆರಂಭವಾಗಿದ್ದು, ನವೆಂಬರ್‌ ಅಂತ್ಯದವರೆಗೂ ಆವಕವಿದೆ ಎನ್ನುತ್ತಾರೆ ಇಲ್ಲಿನ ಶೇಂಗಾ ಸಗಟು ಮಾರಾಟಗಾರರು. 

ADVERTISEMENT

ಧಾರವಾಡ ತಾಲ್ಲೂಕು ಸೇರಿದಂತೆ ಹುಬ್ಬಳ್ಳಿ ಗ್ರಾಮೀಣ ಪ್ರದೇಶ, ಶಿವಳ್ಳಿ, ಹೆಬ್ಬಳ್ಳಿ, ಬಂಡಿವಾಡ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕಂದಗೋಳ, ನಾಗರಹಳ್ಳಿ, ಶಿರಗುಪ್ಪಿ, ರಾಣೆಬೆನ್ನೂರ ಹಾಗೂ ನರಗುಂದದಿಂದಲೂ ರೈತರು ಶೇಂಗಾ ಚೀಲಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ. ಎಪಿಎಂಸಿಯ ಕಾಳುಕಡಿ ವಿಭಾಗದ ಮಳೆಗೆಗಳ ಆವರಣ ಹಾಗೂ ರಸ್ತೆಗಳು ಶೇಂಗಾ ರಾಶಿಗಳಿಂದ ತುಂಬಿದೆ.

ನಿತ್ಯ ಕನಿಷ್ಠ 2 ಸಾವಿರ ಕ್ವಿಂಟಲ್‌ ಆವಕ: 

‘ನಿತ್ಯ ಎಪಿಎಂಸಿ ಮಾರುಕಟ್ಟೆಗೆ ಧಾರವಾಡ ಜಿಲ್ಲೆ ಸೇರಿದಂತೆ ಸುತ್ತುಮುತ್ತಲಿನ ಜಿಲ್ಲೆಗಳಿಂದಲೂ ಕನಿಷ್ಠ 2 ಸಾವಿರ ಕ್ವಿಂಟಲ್‌ ಶೇಂಗಾ ಆವಕವಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ರೈತರು ನಿರೀಕ್ಷಿಸಿದಷ್ಟು ಬೆಲೆಗೆ ಶೇಂಗಾ ಮಾರಾಟವಾಗುತ್ತಿಲ್ಲ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್‌.ಗುರುಪ್ರಸಾದ್‌. 

‘ಮುಂಗಾರು ಅವಧಿಯಲ್ಲಿ ಜಿಲ್ಲೆಯ ಕೆಲವೆಡೆ ನಿರಂತರವಾಗಿ ಸುರಿದ ಮಳೆಯು ಶೇಂಗಾ ಬೆಳೆಗೆ ಹಾನಿಯುಂಟು ಮಾಡಿತ್ತು. ಸಹಜವಾಗಿ ಇಳುವರಿ ಕುಂಠಿತವಾಯಿತು. ಗುಣಮಟ್ಟದಲ್ಲಿಯೂ ವ್ಯತ್ಯಾಸವಾಯಿತು. ಇದರಿಂದಾಗಿ ರೈತರು ನಿರೀಕ್ಷಿಸಿದಷ್ಟು ಬೆಲೆ ಸಿಗುತ್ತಿಲ್ಲ. ಆದರೆ, ಜಿಲ್ಲೆಯ ಕೆಲ ಭಾಗದಲ್ಲಿ ಶೇಂಗಾ ಬೆಳೆಗೆ ಉತ್ತಮ ವಾತಾವರಣ ಇದ್ದ ಕಾರಣ, ಇಳುವರಿ ಚೆನ್ನಾಗಿ ಬಂದಿದೆ. ಗುಣಮಟ್ಟದ ಶೇಂಗಾವೂ ಬಂದಿದೆ’ ಎನ್ನುತ್ತಾರೆ ಅವರು.

‘ಗುಣಮಟ್ಟದ ಆಧಾರದ ಮೇಲೆ ಶೇಂಗಾ (ಸಿಪ್ಪೆಯ ಸಹಿತ) ಮಾರಾಟವಾಗುತ್ತಿದೆ. ಈಗಾಗಲೇ ಜಿಲ್ಲೆಯ ಕೆಲವೆಡೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದಡಿ ಶೇಂಗಾ ಖರೀದಿಸಲು ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ಗುಣಮಟ್ಟದ ಶೇಂಗಾ ಹೊಂದಿರುವ ರೈತರು ಖರೀದಿ ಕೇಂದ್ರಗಳಿಗೆ ಹೋಗುತ್ತಿದ್ದಾರೆ’ ಎನ್ನುತ್ತಾರೆ ಅವರು. 

‘ಮುಂಗಾರು ವೇಳೆ ಮಳೆ ಚೆನ್ನಾಗಿ ಬರುತ್ತಿದೆ ಎಂದು ರೈತರು ಉದ್ದು, ಹೆಸರು ಬೆಳೆಯ ಪ್ರದೇಶದಲ್ಲಿಯೂ ಶೇಂಗಾ ಬಿತ್ತನೆ ಮಾಡಿದ್ದರು. ಆದರೆ, ಕಾಳು ಕಟ್ಟುವ ವೇಳೆ ಸುರಿದ ನಿರಂತರ ಮಳೆಯಿಂದಾಗಿ ಶೇಂಗಾ ಗುಣಮಟ್ಟಕ್ಕೆ ಹೊಡೆತು ಬಿತ್ತು. ಇದರಿಂದಾಗಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಜಿಲ್ಲೆಯ ಕೆಲ ಭಾಗದಲ್ಲಿ ಒಣ ಹವೆ ಇದ್ದ ಕಾರಣ ರೈತರಿಗೆ ಗುಣಮಟ್ಟದ ಶೇಂಗಾದ ಬೆಳೆ ಬಂದಿದ್ದು, ಪ್ರತಿ ಕ್ವಿಂಟಾಲ್‌ಗೆ ₹6,800 ತನಕವೂ ಮಾರಾಟವಾಗಿದೆ’ ಎನ್ನುತ್ತಾರೆ ಅವರು.  

2024–25ನೇ ಸಾಲಿನ ಮುಂಗಾರು ಹಂಗಾಮಿನ ಶೇಂಗಾವು 49582 ಕ್ವಿಂಟಲ್‌ ಶೇಂಗಾ ಆವಕವಾಗಿತ್ತು. ಈ ಬಾರಿ ಅ.15ರವರೆಗೆ 26541 ಕ್ವಿಂಟಲ್‌ ಶೇಂಗಾ ಆವಕವಾಗಿದೆ. ನವೆಂಬರ್‌ ಅಂತ್ಯದವರಿಗೂ ಆವಕವಿದೆ
- ಕೆ.ಎಚ್‌.ಗುರುಪ್ರಸಾದ್‌, ಎಪಿಎಂಸಿ ಕಾರ್ಯದರ್ಶಿ
ಜಿಲ್ಲೆಯಲ್ಲಿ ಮುಂಗಾರಿನ ಹಂಗಾಮಿನ ಶೇಂಗಾ ಆವಕ ನಿರೀಕ್ಷಿಸಿದಷ್ಟು ಬಂದಿಲ್ಲ. ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ವಿಂಟಲ್‌ ಶೇಂಗಾ (ಸಿಪ್ಪೆಸಹಿತ) ₹3500 ರಿಂದ ₹6800ರ ತನಕ ಮಾರಾಟವಾಗಿದೆ
ಮುರುಗೇಶ ಬಿ.ಕಬ್ಬೂರು, ಮರ್ಚಂಟ್‌, ಕಾಳುಕಡಿ ವಿಭಾಗ ಎಪಿಎಂಸಿ
ಶೇಂಗಾ ಬೆಳೆ ಕಾಳು ಕಟ್ಟುವ ವೇಳೆ ಹೆಚ್ಚು ಮಳೆ ಸುರಿಯಿತು. ನಾವು ನಿರೀಕ್ಷಿಸಿದಷ್ಟು ಇಳುವರಿ ಬರಲಿಲ್ಲ. ಗಟ್ಟಿ ಕಾಳು ಬಂದಿಲ್ಲ. ಬೆಳೆಗೆ ಖರ್ಚು ಮಾಡಿದ ಹಣ ಸಿಗುತ್ತಿಲ್ಲ
ಚನ್ನಪ್ಪಗೌಡ, ರೈತ, ಮಣಕವಾಡ ನವಲಗುಂದ ತಾಲ್ಲೂಕು. 
ಹುಬ್ಬಳ್ಳಿಯ ಎಪಿಎಂಸಿಯ ಕಾಳುಕಡಿ ವಿಭಾಗದ ರಸ್ತೆಯಲ್ಲಿ ಶೇಂಗಾ ರಾಶಿಗಳನ್ನು ಹಾಕಿರುವುದು 

ಬೆಳೆಯ ಖರ್ಚು ಸಿಗುತ್ತಿಲ್ಲ..!

‘3 ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದೆ. ₹50 ಸಾವಿರ ಖರ್ಚಾಗಿತ್ತು. 24 ಕ್ವಿಂಟಲ್‌ ಬಂದಿದೆ. ಕಾಳು ಸಣ್ಣದಿದೆ. ಗಟ್ಟಿಯಿಲ್ಲ ಎಂಬ ಕಾರಣದಿಂದ ಒಟ್ಟು ₹45 ಸಾವಿರಕ್ಕೆ ಮಾರಾಟವಾಗಿದೆ. ಬೆಳೆಗೆ ಖರ್ಚು ಮಾಡಿದ ಹಣವೂ ಬಂದಿಲ್ಲ’ ಎಂದು ನವಲಗುಂದ ತಾಲ್ಲೂಕಿನ ಮಣಕವಾಡ ಗ್ರಾಮದ ರೈತ ಶಂಕರಗೌಡ ಬರಮಗೌಡ ಅಳಲು ತೋಡಿಕೊಂಡರು.  ‘ಕಳೆದ ಬಾರಿ ಕ್ವಿಂಟಲ್‌ ಶೇಂಗಾ ಬೆಲೆ ₹7 ಸಾವಿರ ತನಕ ಮಾರಾಟವಾಗಿತ್ತು. ಖರೀದಿ ಕೇಂದ್ರಕ್ಕೆ ಹೊಯ್ದರೆ ಅಲ್ಲಿ ಎಫ್‌ಎಕ್ಯೂ ಮಾನದಂಡದಂತೆ ಶೇಂಗಾ ಗುಣಮಟ್ಟವಿಲ್ಲ ಎಂದು ಹೇಳಿ ತಿರಸ್ಕರಿಸಲಾಗಿತ್ತು. ಇಲ್ಲಿಗೆ ತಂದಿದ್ದೇವೆ. ಕಡಿಮೆ ಬೆಲೆ ನಿಗದಿ ಪಡಿಸಲಾಗಿದೆ. ಬೆಳೆಗೆ ಹಾಕಿದ ಖರ್ಚು ಬಂದರೆ ಸಾಕಾಗಿದೆ‘ ಎಂದು ಮಣಕವಾಡದ ಮತ್ತೊಬ್ಬ ರೈತ ಚನ್ನಪ್ಪಗೌಡ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.