
ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರಸಕ್ತ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ₹5 ಸಾವಿರ ಕೋಟಿ ಹಣ ನೀಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸುಳ್ಳು ಹೇಳಿಕೆ ನೀಡುವ ಮೂಲಕ ಸದನಕ್ಕೆ ಅವಮಾನ ಮಾಡಿದ್ದಾರೆ‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಸಚಿವರು ಕಲಾಪದಲ್ಲಿ ಈ ಎರಡು ತಿಂಗಳ ಹಣವನ್ನು ಜಮೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ, ಆದರೆ ಅದಕ್ಕೆ ದಾಖಲೆಯಿಲ್ಲ. ನಮ್ಮ ಬಳಿ ದಾಖಲೆ ಇದ್ದು, ಸಭೆ ಪರಿಶೀಲಿಸಬೇಕು‘ ಎಂದು ಹೇಳಿದರು.
ಈ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಸಭಾಧ್ಯಕ್ಷರಿಗೆ ಶೂನ್ಯ ವೇಳೆಯಲ್ಲಿ ಕುರಿತು ಮಾತನಾಡಲಿಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದೆವು. ಎರಡು ತಿಂಗಳಿನ ಕಂತು ಸುಮಾರು ಐದು ಸಾವಿರ ಕೋಟಿ ಹಣವನ್ನು ಫಲಾನುಭವಿಗಳಿಗೆ ನೀಡಿಲ್ಲ ಎಂದು ಸದನದಲ್ಲಿ ದಾಖಲೆ ಸಮೇತ ನೀಡುತ್ತೇವೆಂದು ಹೇಳಿದೆವು’ ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸುಳ್ಳು ಮಾಹಿತಿ ನೀಡುವ ಮೂಲಕ ಕಲಾಪಕ್ಕೆ ಅಗೌರವ ತೋರಿದ್ದು, ಸಚಿವರ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಸಚಿವರ ಉತ್ತರಕ್ಕೆ ಪ್ರತಿಪಕ್ಷದವರು ನೀಡಿದ ದಾಖಲೆಯನ್ನು ಸಭಾಪತಿ ಪರಿಶೀಲಿಸಿ, ಸದನಕ್ಕೆ ಯಾವುದೇ ಸುಳ್ಳು ಮಾಹಿತಿ ನೀಡುವ ಮೂಲಕ ಅಗೌರವ ತರುವ ಕೆಲಸ ಮಾಡಬಾರದು ಎಂದರು.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ‘2025 ರ ಸಾಲಿನ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನ ಕಂತನ್ನು ಕೂಡಲೇ ಬಿಡುಗಡೆಗೊಳಿಸುತ್ತೇವೆ. ಸಚಿವರಿಂದ ಸೋಮವಾರ ನಡೆಯುವ ಕಲಾಪದಲ್ಲಿ ಉತ್ತರ ಕೊಡಿಸುತ್ತೇವೆ‘ ಎಂದು ಸದನಕ್ಕೆ ತಿಳಿಸಿದರು.
‘ಸದನದ ಗೌರವವನ್ನು ಸಚಿವರಾದಿಯಾಗಿ ಎಲ್ಲರೂ ಕಾಪಾಡಬೇಕು. ಸುಳ್ಳು ಮಾಹಿತಿ ನೀಡಬಾರದು’ ಎಂದು ಎಚ್ಚರಿಸಿದರು.
‘ನಮ್ಮ ಪ್ರಯತ್ನದಿಂದ ರಾಜ್ಯದ 1.28 ಕೋಟಿ ಫಲಾನುಭವಿಗಳ ಖಾತೆಗೆ ಎರಡೂ ತಿಂಗಳಿನ ಗೃಹಲಕ್ಷ್ಮಿ ಹಣವು ಪಾವತಿಯಾಗಲಿದೆ‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.