ADVERTISEMENT

ಆರ್‌ಎಸ್‌ಎಸ್‌ ಪ್ರಮುಖರಿಗೆ ರಾಷ್ಟ್ರಧ್ವಜ ಹಸ್ತಾಂತರ

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನೇತೃತ್ವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 14:53 IST
Last Updated 10 ಆಗಸ್ಟ್ 2022, 14:53 IST
ಹುಬ್ಬಳ್ಳಿಯ ಹೆಗ್ಗೇರಿ ಕೇಶವ ಕುಂಜದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಅಮರನಾಥ್‌ ಅವರಿಗೆ ವಿದ್ಯಾನಗರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಬುಧವಾರ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು
ಹುಬ್ಬಳ್ಳಿಯ ಹೆಗ್ಗೇರಿ ಕೇಶವ ಕುಂಜದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಅಮರನಾಥ್‌ ಅವರಿಗೆ ವಿದ್ಯಾನಗರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಬುಧವಾರ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು   

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಕೇಶವ ಕುಂಜದ ಆರ್‌ಎಸ್‌ಎಸ್‌ ಕಚೇರಿ ಪ್ರಮುಖರಿಗೆ ಕಾಂಗ್ರೆಸ್‌ನ ಕಾರ್ಯಕರ್ತರು ಬುಧವಾರ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಈ ವೇಳೆ ಆರ್‌ಎಸ್‌ಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

‘ನಮ್ಮ ಬಳಿ ರಾಷ್ಟ್ರಧ್ವಜ ಇದೆ, ನೀವು ಕೊಡುವ ರಾಷ್ಟ್ರಧ್ವಜ ಹಾರಿಸುವ ಅವಶ್ಯಕತೆ ಇಲ್ಲ’ ಎಂದು ಆರ್‌ಎಸ್‌ಎಸ್‌ನ ಪ್ರಮುಖ ಅಮರನಾಥ ಅವರು ಹೇಳಿದರು. ‘ನಾವು ಕೊಡುವ ಧ್ವಜ ಸ್ವೀಕರಿಸಿದರೆ ನೀವು ರಾಷ್ಟ್ರಪ್ರೇಮಿ ಎಂದು ನಾವು ಒಪ್ಪಿಕೊಳ್ಳುತ್ತೇವೆ’ಎಂದು ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ನ ಅಧ್ಯಕ್ಷ ರಜತ ಉಳ್ಳಾಗಡ್ಡಿ ಮಠ ಹೇಳಿದರು.

ಅಮರನಾಥ ಅವರು ಮಾತನಾಡಿ, ‘ಆಗಸ್ಟ್‌ 15ರಂದು ನಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ. ನೀವೂ ಬನ್ನಿ, ಪ್ರಚಾರಕ್ಕೆ ಇದನ್ನು ಬಳಸಬೇಡಿ. ವರ್ಷದಲ್ಲಿ ಎರಡು ಬಾರಿ ನಾವು ರಾಷ್ಟ್ರಧ್ವಜ ಹಾರಿಸುತ್ತಿದ್ದೇವೆ. ಕುರುಡು ಕಣ್ಣಿನಿಂದ ನೋಡಬೇಡಿ. ನೀವೇ ನೇತೃತ್ವ ವಹಿಸಿ, ಮಸೀದಿಗಳ ಮೇಲೆಯೂ ರಾಷ್ಟ್ರಧ್ವಜ ಹಾರಿಸಿ’ ಎಂದು ಸವಾಲು ಹಾಕಿದರು.

ADVERTISEMENT

ರಜತ ಉಳ್ಳಾಗಡ್ಡಿಮಠ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ಕಳೆದ ಏಳು ದಿನಗಳಿಂದ ಭಾರತೀಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಪ್ರೊಫೈಲ್ ಪಿಕ್ಚರ್ ಆಗಿ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಆರ್‌ಎಸ್ಎಸ್ ನವರು ತಮ್ಮ ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಭಗವಾಧ್ವಜವನ್ನೇ ಇಟ್ಟುಕೊಂಡಿದ್ದಾರೆ’ ಎಂದರು.

ನಮ್ಮ ಬಳಿ ಐದು ಧ್ವಜ ಇದೆ: ‘ನಮ್ಮ ಬಳಿ ಐದು ರಾಷ್ಟ್ರಧ್ವಜ ಇದೆ ಎಂದು ಆರ್‌ಎಸ್‌ಎಸ್‌ನ ಮುಖಂಡರು ಹೇಳಿದರು. ಕಚೇರಿಯಿಂದ ರಾಷ್ಟ್ರಧ್ವಜವನ್ನು ತಂದು ತೋರಿಸಿದರು. ಈ ವೇಳೆ ಇದರಲ್ಲಿ ಕಲೆ ಇದೆ ಇದನ್ನು ಬಳಸಬೇಡಿ ಎಂದು ಕಾಂಗ್ರೆಸ್‌ನ ಮುಖಂಡರು ಹೇಳಿದರು. ವಾಗ್ವಾದದ ನಂತರ ಆರ್‌ಆರ್‌ಎಸ್‌ ಪ್ರಮುಖರು ರಾಷ್ಟ್ರಧ್ವಜ ಸ್ವೀಕರಿಸಿದರು.

ಪೈಪೋಟಿಗಿಳಿದು ಘೋಷಣೆ: ಕಾಂಗ್ರೆಸ್‌ನ ಕಾರ್ಯಕರ್ತರು ಖಾದಿ ಬಳಸಿ, ಖಾದಿ ಉಳಿಸಿ ಎಂದು ಘೋಷಣೆ ಕೂಗಿದರು. ನಂತರ ಕಾಂಗ್ರೆಸ್‌ ಮತ್ತು ಆರ್‌ಎಸ್‌ಎಸ್‌ನ ಪ್ರಮುಖರು ಭಾರತ್‌ ಮಾತಾಕಿ ಜೈ, ವಂದೇ ಮಾತರಂ ಎಂದು ಪೈಪೋಟಿಗಿಳಿದು ಘೋಷಣೆ ಕೂಗಿದರು.

ಕಾಂಗ್ರೆಸ್‌ನ ಹೂವಪ್ಪ ದಾಯಗೋಡಿ, ಬಸವರಾಜ ಮಲಕಾರಿ, ಮೊಹಮ್ಮದ್ ಶರೀಫ್ ಗರಗದ, ವಿರೇಶ್ ಜಂಜುನವರ, ಕಿರಣ ಹಿರೇಮಠ, ಶಿವುಕುಮಾರ ಹಿರೇಮಠ, ಬಸವರಾಜ ಮ್ಯಾಗೇಡಿ, ಮಲ್ಲಣ್ಣ ಮುತ್ತಗಿ, ಸಂತೋಷ್ ಮುದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.