ADVERTISEMENT

ಧಾರವಾಡ | ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ; ಆರೋಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 16:32 IST
Last Updated 8 ಆಗಸ್ಟ್ 2023, 16:32 IST
ಧಾರವಾಡದಲ್ಲಿ ಮಂಗಳವಾರ ಬೀದಿಬದಿ ವ್ಯಾಪಾರಿ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು
ಧಾರವಾಡದಲ್ಲಿ ಮಂಗಳವಾರ ಬೀದಿಬದಿ ವ್ಯಾಪಾರಿ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು   

ಧಾರವಾಡ: ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಭಾರತ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅವಳಿ ನಗರದಲ್ಲಿ 18 ಸಾವಿರ ಬೀದಿಬದಿ ವ್ಯಾಪಾರಿಗಳ ಪೈಕಿ 9,400 ವ್ಯಾಪಾರಿಗಳು ಎಲ್ಒಆರ್ ಪ್ರಮಾಣಪತ್ರ ಹೊಂದಿದ್ದಾರೆ. ಆದರೂ ಮಹಾನಗರ ಪಾಲಿಕೆ, ಪೊಲೀಸರು, ಪಿಡಬ್ಲ್ಯುಡಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ನಿತ್ಯ ಕಿರುಕುಳ ನೀಡುತ್ತಾರೆ. ಉದ್ದೇಶಪೂರ್ವಕವಾಗಿ ಎಲ್ಲ ನಿಗಮಗಳು ಹಕ್ಕುಪತ್ರ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಪಾದಿಸಿದರು.

‘ಮುನ್ಸಿಪಲ್ ಕಾಯ್ದೆಯಡಿ ಎಲ್ಲ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಂತರ ಅವರಿಗೆ ಪ್ರಮಾಣ ಪತ್ರ ನೀಡಿ, ಮಾರಾಟ ವಲಯಗಳನ್ನು ರಚಿಸಿ, ಸ್ಥಳ ನೀಡಬೇಕು. ಈವರೆಗೆ ವೆಂಡಿಂಗ್ ಝೋನ್ ಮಾಡಲು ಕ್ರಮಕೈಗೊಂಡಿಲ್ಲ. ರಸ್ತೆಯಲ್ಲೇ ಗೂಡಂಗಡಿ ಹಾಕಿಕೊಂಡಿದ್ದೇವೆ. ರಸ್ತೆ ಅತಿಕ್ರಮಣ ಎಂದು ಹೇಳಿ ಅಧಿಕಾರಿಗಳು ಅಂಗಡಿ ತೆರವು ಮಾಡಿಸಿದ್ಧಾರೆ.  ಹುಬ್ಬಳ್ಳಿಯ ಷಾ ಬಜಾರ್ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ಫಲಕ ಅಳವಡಿಸಿ, ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವ್ಯಾಪಾರಿಗಳ ಸಮಸ್ಯೆ ಆಲಿಸಿ, ಸೌಲಭ್ಯ ಒದಗಿಸಲು ಮೂರು ತಿಂಗಳಿಗೊಮ್ಮೆ ಸಭೆ ಕರೆಯಬೇಕು. ತೆರವು ಮಾಡುವಾಗ, ಪಾರ್ಕಿಂಗ್ ಬೋರ್ಡ್ ಅಳವಡಿಸುವ ಮೊದಲು ಸಂಘಟನೆಯ ಸದಸ್ಯರೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಆದಮಸಾಬ್ ಮುಲ್ಲಾನವರ, ಇಸ್ಮಾಯಿಲ್ ಬೀಳೆ ಪ್ರಸಾದ, ನವೀನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.