ADVERTISEMENT

ಹವ್ಯಕರ ಕೊಡುಗೆ ಉತ್ಕೃಷ್ಟವಾದದ್ದು: ಗುರುದತ್ತ ಹೆಗಡೆ

‘ಹವ್ಯಕ ಹಬ್ಬ’ದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 13:40 IST
Last Updated 26 ಜೂನ್ 2022, 13:40 IST
ಹುಬ್ಬಳ್ಳಿಯಲ್ಲಿ ನಡೆದ ಹವ್ಯಕ ಹಬ್ಬದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿಯಲ್ಲಿ ನಡೆದ ಹವ್ಯಕ ಹಬ್ಬದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ‘ಹವ್ಯಕ ಸಮಾಜದವರ ಜನಸಂಖ್ಯೆ ಕಡಿಮೆಯೇ ಇರಬಹುದು. ಆದರೆ, ಸಮಾಜಕ್ಕೆ ಈ ಸಮುದಾಯದ ಕೊಡುಗೆ ಉತ್ಕೃಷ್ಟವಾದದ್ದು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಇಲ್ಲಿನ ಲೂತಿಮಠ ಲೇಔಟ್‌ನ ಹವ್ಯಕ ಭವನದಲ್ಲಿ ಭಾನುವಾರಹಮ್ಮಿಕೊಂಡಿದ್ದ ‘ಹವ್ಯಕ ಹಬ್ಬ’ದಲ್ಲಿ ಮಾತನಾಡಿದ ಅವರು, ‘ಪರಿಸರ ಸಂರಕ್ಷಣೆಯಲ್ಲಿ ಸಮಾಜದವರ ಪಾತ್ರ ದೊಡ್ಡದು’ ಎಂದರು.

‘ಸಭೆ ಸಮಾರಂಭಗಳಲ್ಲಿ ಮಾತನಾಡಲು ನನಗೆ ಹಿಂಜರಿಕೆ ಇಲ್ಲ. ಆದರೆ, ಇಂದು ಇಲ್ಲಿರುವವರು ನನ್ನ ಸಂಬಂಧಿಕರು ಹಾಗೂ ಬಂಧು–ಮಿತ್ರರು. ಇವರ ಎದುರು ಮಾತನಾಡುವಾಗ ಹೆಚ್ಚು ಎಚ್ಚರ ವಹಿಸಬೇಕಿದೆ. ನಾನು ಏನು ಮಾತನಾಡಿದ್ದೇನೆ ಎಂಬುದನ್ನು ಅವರು ಚರ್ಚಿಸುತ್ತಾರೆ. ಎಲ್ಲಾದರೂ ಸಿಕ್ಕಾಗ, ನೀನು ಅಂದು ಹೀಗೆ ಮಾತನಾಡಿದ್ದೆ ಎಂದು ನೆನಪಿಸುತ್ತಾರೆ’ ಎಂದು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ADVERTISEMENT

ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಮಾತನಾಡಿ, ‘ಹವ್ಯಕರು ಪರಿಶ್ರಮ, ವೈಚಾರಿಕ, ಸಾಮಾಜಿಕ, ನೈತಿಕ ಬದ್ಧತೆ ಮತ್ತು ಸಂಘಟನಾ ಬಲದಿಂದ ಗುರುತಿಸಿಕೊಂಡಿದ್ದೇವೆ. ಎಲ್ಲ ರಂಗಗಳಲ್ಲಿಯೂ ಛಾಪು ಮೂಡಿಸಿದ್ದೇವೆ’ ಎಂದರು.

‘ಇಸ್ರೇಲ್‌ನ ಯಹೂದಿ ಸಮುದಾಯದ ಜನಸಂಖ್ಯೆಯು ಬಹುಶಃ ಹವ್ಯಕ ಸಮುದಾಯದ ಜನಸಂಖ್ಯೆಯಷ್ಟೇ ಇರಬಹುದು. ಅವರ ಸಾಧನೆಗಳು ಜಗಜ್ಜಾಹೀರಾಗಿವೆ. ಆದರೆ ನಾವು ಸಂಕೋಚ ಸ್ವಭಾವದಿಂದ ಇನ್ನೂ ಹೊರಬಂದಿಲ್ಲ. ಸಂಕೋಚ ಬಿಟ್ಟು ಹೊರಬಂದರೆ ನಮ್ಮಲ್ಲಿನ ಪ್ರತಿಭೆಯ ಮೊಗ್ಗುಗಳು ಇನ್ನಷ್ಟು ಅರಳಬಲ್ಲವು’ ಎಂದು ಅಭಿಪ್ರಾಯಪಟ್ಟರು.

ಇಬ್ಬರೂಅಧಿಕಾರಿಗಳು ಹವ್ಯಕ ಭಾಷೆಗಳಲ್ಲಿ ಅನಿಸಿಕೆಹಂಚಿಕೊಂಡಿದ್ದು ವಿಶೇಷವಾಗಿತ್ತು.

ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆ‌ಬ್ಬಾರ, ‘ನಮ್ಮ ಅಗತ್ಯಗಳಿಗೆ ಒಂದು ಮಿತಿ ಹಾಕಿಕೊಂಡು, ಸಮುದಾಯದಲ್ಲಿನ ಬಡವರ್ಗದವರಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು. ಆಗ ಸಮುದಾಯವು ಇನ್ನಷ್ಟು ಬೆಳವಣಿಗೆ ಕಾಣಲು ಸಾಧ್ಯ’ ಎಂದು ಹೇಳಿದರು.

ಹವ್ಯಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ಟ, ಉಪಾಧ್ಯಕ್ಷ ಶ್ರೀಕಾಂತ ಹೆಗಡೆ, ಕಾರ್ಯದರ್ಶಿ ಸುದರ್ಶನ ಜಿ.ಎಚ್. ಹಾಗೂ ಹಿರಿಯ ಪತ್ರಕರ್ತ ಮೋಹನ ಹೆಗಡೆ ವೇದಿಕೆಯಲ್ಲಿದ್ದರು.

**

ಪ್ರತಿಭಾ ಪುರಸ್ಕಾರ, ಸನ್ಮಾನ

ಸಿ.ಎ., ಎಂಬಿಎ ಪದವಿ ತೇರ್ಗಡೆ ಹೊಂದಿದ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕ ಪಡೆದ ಹವ್ಯಕ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಚಿತ್ರಕಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಸುಮಂಗಲಾ ಹೆಗಡೆ, ಸಂಗೀತ ವಿದುಷಿ ರಾಧಾ ಹೆಗಡೆ, ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪ್ರೊ. ನಿಖಿಲ್ ಹೆಗಡೆ ಹಾಗೂ ಯಕ್ಷಗಾನ ಕಲೆಯ ಪ್ರೋತ್ಸಾಹಕ ಆರ್.ಜಿ. ಭಟ್ಟ ವರ್ಗಾಸರ ಅವರನ್ನು ಸನ್ಮಾನಿಸಲಾಯಿತು.

ಹಬ್ಬದ ಭಾಗವಾಗಿ ಆಯೋಜಿಸಲಾಗಿದ್ದ ಸಿರಿಧಾನ್ಯದಿಂದ ಅಡುಗೆ ತಯಾರಿಸುವ ಸ್ಪರ್ಧೆ ಮತ್ತು ಹವ್ಯಕರ ಹಬ್ಬದ ಹಾಡಿನ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ‘ದಮಯಂತಿ ಪುನಃ ಸ್ವಯಂವರ’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.

**

ಹವ್ಯಕ ಸಮಾಜದ ಶಿಕ್ಷಕರು ಪ್ರತಿ ಚುನಾವಣೆಯಲ್ಲಿ ನನ್ನ ಬೆನ್ನಿಗೆ ನಿಂತಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಈ ಹಿಂದಿನಂತೆಯೇ ಮುಂದೆಯೂ ನನ್ನ ಸಹಕಾರ ಇರಲಿದೆ
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.