ADVERTISEMENT

ಜೋಶಿ, ಶೆಟ್ಟರ್‌ ಬೆವರಿಳಿಸಿದ ಸಂಕೇಶ್ವರ!

ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಅಭಿವೃದ್ಧಿ ನೆಪದಲ್ಲಿ ಲೂಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 8:57 IST
Last Updated 17 ಡಿಸೆಂಬರ್ 2019, 8:57 IST
ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಅಶೋಕ ಶೆಟ್ಟರ್‌, ಸಚಿವರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಮುಖಂಡ ವಿಜಯ ಸಂಕೇಶ್ವರ, ವಿ.ಎಸ್‌.ವಿ.ಪ್ರಸಾದ್‌ ಇದ್ದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಅಶೋಕ ಶೆಟ್ಟರ್‌, ಸಚಿವರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಮುಖಂಡ ವಿಜಯ ಸಂಕೇಶ್ವರ, ವಿ.ಎಸ್‌.ವಿ.ಪ್ರಸಾದ್‌ ಇದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಕೈಗೆತ್ತಿಕೊಂಡಿರುವ ನೂರಾರು ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿವೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಜಗದೀಶ ಶೆಟ್ಟರ್‌ ಅವರ ಅಸಮರ್ಪಕ ನಿರ್ವಹಣೆಯೇ ಕಾರಣ’ ಎಂದು ಬಿಜೆಪಿ ಮುಖಂಡ, ಉದ್ಯಮಿ ವಿಜಯ ಸಂಕೇಶ್ವರ ನೇರ ಆರೋಪ ಮಾಡಿದರು.

ಹುಬ್ಬಳ್ಳಿ– ಧಾರವಾಡ ಅಭಿವೃದ್ಧಿ ವೇದಿಕೆಯು ಸೋಮವಾರ ಇಲ್ಲಿ ಆಯೋಜಿಸಿದ್ದ ಅವಳಿ ನಗರ ಅಭಿವೃದ್ಧಿ ಕುರಿತ ಸಭೆಯಲ್ಲಿ ಸಚಿವದ್ವಯರ ಸಮ್ಮುಖದಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸಚಿವರು ಕೆಲ ಕಾಲ ತಬ್ಬಿಬ್ಬಾದರು. ಸಂಕೇಶ್ವರ್‌, ಈ ವೇದಿಕೆಯ ಅಧ್ಯಕ್ಷರೂ ಹೌದು.

‘ಎಲ್ಲಡೆ ವಿಫಲವಾದ ಬಿಆರ್‌ಟಿಎಸ್‌ ಯೋಜನೆಯನ್ನು ಬೇಡ ಎಂದರೂ ಇಲ್ಲಿಗೆ ತಂದಿದ್ದೀರಿ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಕಿರಿದಾದ ಮಿಶ್ರಪಥದಲ್ಲಿ ‌ಶೇ 70ರಷ್ಟು ಜನ, ವಾಹನ ಸಂಚರಿಸಿದರೆ, ವಿಸ್ತಾರವಾದ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಶೇ 30ರಷ್ಟು ಜನ ಮತ್ತು ಬೆರಳೆಣಿಕೆಯಷ್ಟು ಬಿಆರ್‌ಟಿಎಸ್‌ ಬಸ್‌ಗಳು ಓಡಾಡುತ್ತಿವೆ. ಇದರಿಂದ ಸಂಚಾರ ಮೊದಲಿಗಿಂತ ಕಷ್ಟ ಆಗಿದೆ. ಬಹುತೇಕ ಕಡೆ ಪಾದಚಾರಿ ಮಾರ್ಗ ಇಲ್ಲ. ಇರುವ ಕಡೆಯೂ ಒತ್ತುವರಿಯಾಗಿದೆ. ನವಲೂರು ಮೇಲ್ಸೇತುವೆ ಇನ್ನೂ ಪೂರ್ಣವಾಗಿಲ್ಲ’ ಎಂದು ಲೋಪಗಳ ಪಟ್ಟಿ ಮಾಡಿದರು.

ADVERTISEMENT

‘ಸಿಆರ್‌ಎಫ್‌ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆಗಳು ಕೂಡ ಅವೈಜ್ಞಾನಿಕವಾಗಿವೆ. ಹಳ್ಳಿ ರಸ್ತೆಗಳಿಗಿಂತ ಕೆಟ್ಟದಾಗಿವೆ. ಸಿಮೆಂಟ್‌ ರಸ್ತೆಗಳು ನಿರ್ಮಾಣವಾಗಿ ವರ್ಷದೊಳಗೆ ಕಿತ್ತು ಹೋಗುತ್ತಿವೆ. ಈ ರೀತಿ ನೂರಾರು ಕೋಟಿ ರೂಪಾಯಿ ಹಣ ಖರ್ಚು ಮಾಡಿ, ಕಳಪೆ ಕಾಮಗಾರಿ ಮಾಡುವುದು ಯಾವ ಪುರುಷಾರ್ಥಕ್ಕೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಶೆಟ್ಟರ್‌ ಮತ್ತು ಜೋಶಿ ಹುಬ್ಬಳ್ಳಿಯ ಎರಡು ಕಣ್ಣುಗಳಿದ್ದಂತೆ. ನಿಮ್ಮ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಎರಡು ಮಾತಿಲ್ಲ. ಆದರೆ, ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿಲ್ಲ. ರಸ್ತೆ ಮಾಡುವ ನೆಪದಲ್ಲಿ ಹಣಹೊಡೆಯುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

‘ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ತನ್ನಿ. ಅಕ್ರಮ ಕಟ್ಟಡಗಳನ್ನು ಮೊದಲು ತೆರವುಗೊಳಿಸಿ. ನೂರಾರು ರಸ್ತೆಗಳನ್ನು ಮಾಡುವ ಬದಲು ಗುಣಮಟ್ಟದಿಂದ ಕೂಡಿರುವ ಹತ್ತಾರು ರಸ್ತೆಗಳನ್ನು ಮಾಡಿ’ ಎಂದು ಸಲಹೆ ನೀಡಿದರು.

ನಿಮ್ಮ ಆಶೀರ್ವಾದಿಂದ ಈ ಸ್ಥಾನಮಾನ: ‘ನಿಮ್ಮ ಆಶೀರ್ವಾದದಿಂದ ನಾನು ಈ ಸ್ಥಾನಮಾನಕ್ಕೆ ಬಂದಿದ್ದೇನೆ. ಅವಳಿ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಕೇಂದ್ರದಿಂದ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದೇನೆ. ಆದರೆ, ಅನುಷ್ಠಾನದಲ್ಲಿ ಲೋಪಗಳಾಗಿವೆ’ ಎಂದು ಪ್ರಹ್ಲಾದ ಜೋಶಿ ಒಪ್ಪಿಕೊಂಡರು.

‘ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಹಿಂದಿನ ಸರ್ಕಾರಗಳಿಂದ ಅಗತ್ಯ ಸಹಕಾರ ಸಿಗಲಿಲ್ಲ. ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡುವಲ್ಲಿ ಅನಗತ್ಯ ವಿಳಂಬ ಮಾಡಲಾಯಿತು. ಪದೇ ಪದೇ ಆಯುಕ್ತರನ್ನು ಬದಲಾಯಿಸಲಾಯಿತು’ ಎಂದು ಸಮಜಾಯಿಷಿ ನೀಡಿದರು.

ಶೆಟ್ಟರ್‌, ಜೋಶಿ ಅವರ ಮಾತಿನಿಂದ ಸಮಾದಾನಗೊಳ್ಳದ ವಿಜಯ ಸಂಕೇಶ್ವರ, ‘ಅಭಿವೃದ್ಧಿ ವಿಷಯದಲ್ಲಿ ಒಟ್ಟಾರೆ ಹುಬ್ಬಳ್ಳಿಗೆ ಅದೃಷ್ಟವಿಲ್ಲ’ ಎಂದು ಛೇಡಿಸಿದರು. ಮುಂದಿನ ದಿನಗಳಲ್ಲಿ ಲೋಪಗಳನ್ನು ಸರಿಪಡಿಸುವ ಭರವಸೆಯನ್ನು ಸಚಿವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.