
ಹುಬ್ಬಳ್ಳಿ: ‘ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ ಕಟ್ಟಡಗಳ ಸಮರ್ಪಕ ಬಳಕೆ, ಖಾಸಗಿ ಪಾಲಾದ ಪಾಲಿಕೆ ಆಸ್ತಿಗಳ ಸಮೀಕ್ಷೆ, ಪಾಲಿಕೆಯಡಿ ಇರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹೆಚ್ಚಳ, ಟ್ರೇಡ್ ಲೈಸೆನ್ಸ್ ನವೀಕರಣ, ಜಾಹೀರಾತು ಶುಲ್ಕ ವಸೂಲಿ ಸೇರಿ ಪಾಲಿಕೆಗೆ ಆದಾಯ ಬರುವಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಬಜೆಟ್ ಮಂಡಿಸಬೇಕು’.
ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಗರದ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೀಗೆ ಸಲಹೆ ನೀಡಿದರು.
‘ಪಾಲಿಕೆಗೆ ಬರುವ ಸಾಕಷ್ಟು ಆದಾಯ ಸೋರಿಕೆ ಆಗುತ್ತಿದೆ. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕೆಎಂಸಿ ಕಾಯ್ದೆಯಂತೆ ಕರ ವಸೂಲಿ ಮಾಡಬೇಕು. ಬಜೆಟ್‌ನಲ್ಲಿ ಸಾರ್ವಜನಿಕರಿಗೆ, ಸಾಧಕರಿಗೆ, ಕಲಾವಿದರಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಯೋಜನೆಗಳಿಗೆ ಹಣ ಮೀಸಲಿಡಬೇಕು’ ಎಂದರು.
ಪಾಲಿಕೆ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಶರತ್ ದೊಡ್ಡಮನಿ ಮಾತನಾಡಿ, ‘ರೈಲ್ವೆ ಇಲಾಖೆಯ 800ಕ್ಕೂ ಹೆಚ್ಚು ಆಸ್ತಿಗಳು ಪಾಲಿಕೆ ವ್ಯಾಪ್ತಿಯಲ್ಲಿದ್ದು, ಈವರೆಗೆ ಕರ ಪಾವತಿಯಾಗಿಲ್ಲ. ಪಿಐಡಿ ನಂಬರ್ ನೀಡಿದರೆ ಕರ ಪಾವತಿಸುತ್ತೇವೆ ಎನ್ನುತ್ತಾರೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ವಿಮಾನ ನಿಲ್ದಾಣದ ಆಸ್ತಿಯಿಂದಲೂ ಪಾಲಿಕೆಗೆ ತೆರಿಗೆ ನಷ್ಟವಾಗುತ್ತಿದೆ’ ಎಂದರು.
‘ಪಾಲಿಕೆ ಮಳಿಗೆಗಳ ಮೇಲೆ ತೆರಿಗೆ ಹೆಚ್ಚಿಸಬೇಕು. ಕನ್ನಡ ಭವನ, ಸಾಂಸ್ಕೃತಿಕ ಭವನ ಹಾಗೂ ಟೌನ್ ಹಾಲ್‌ಗಳನ್ನು ನಿರ್ವಹಣೆ ಮಾಡಿ ಬಾಡಿಗೆ ನೀಡಬೇಕು. ಪಾಲಿಕೆ ಅಧಿಕಾರಿಗಳು ಎಲೆಕ್ಟ್ರಿಕಲ್ ವಾಹನ ಬಳಸಿದರೆ ವೆಚ್ಚ ಕಡಿಮೆಯಾಗಲಿದೆ’ ಎಂದು ಸಂಗ್ರಾಮ ಸೇನೆ ಅಧ್ಯಕ್ಷ ಸಮಜೀವ್ ಧುಮ್ಮಕನಾಳ ಹೇಳಿದರು.
ಸಮತಾ ಸೇನೆ ಮುಖ್ಯಸ್ಥ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘ಶಿಕ್ಷಣ, ಆರೋಗ್ಯದ ಜೊತೆಗೆ ಪಾಲಿಕೆ ಸಮಗ್ರ ಅಭಿವೃದ್ಧಿಯಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ದುಬಾರಿಯಾಗಿದ್ದು, ಲ್ಯಾಮಿಂಗ್ಟನ್ ಶಾಲೆಯನ್ನು ಪಾಲಿಕೆಯೇ ನಡೆಸುವಂತಾಗಬೇಕು. ಕೆರಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣಗಳನ್ನಾಗಿ ಮಾಡಬೇಕು. ಮೇಲ್ಸೇತುವೆ ಕೆಳಗೆ ಇವಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಿದರೆ, ಆದಾಯದ ಮೂಲವಾಗಲಿದೆ. ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿದ ಜನತಾ ಬಜಾರ್ ಹಾಗೂ ಮೀನು ಮಾರುಕಟ್ಟೆಯ ಮಳಿಗೆಗಳನ್ನು ಹಂಚಿಕೆ ಮಾಡಬೇಕು’ ಎಂದು ಹೇಳಿದರು.
ಕೆಸಿಸಿಐ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ಉದ್ಯಮಿ ಉದಯ ರೇವಣಕರ್ ಮಾತನಾಡಿದರು. ಪಾಲಿಕೆ ಉಪ ಆಯುಕ್ತೆ ಅನುರಾಧ ವಸ್ತ್ರದ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮೋರಿ, ಪಾಲಿಕೆ ಸದಸ್ಯರಾದ ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ಮನಸೂರ ಮುದಗಲ್, ಕವಿತಾ ಕಬ್ಬೇರ ಇದ್ದರು.
ಆಟೊ ಚಾಲಕರಿಗೆ ರಿಯಾಯಿತಿ ದರದಲ್ಲಿ ಆಟೊ ಹಾಗೂ ಆಶ್ರಯ ಮನೆಗಳನ್ನು ಹಂಚಿಕೆ ಮಾಡಬೇಕು. ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಕುರಿತು ಘೋಷಿಸಬೇಕು.ಶೇಖರಯ್ಯ ಮಠಪತಿ ಅಧ್ಯಕ್ಷ ಆಟೊ ಚಾಲಕರ ಸಂಘ
ಅವಳಿನಗರದಲ್ಲಿ 25 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದು ಚಲನ್ ನೀಡಿ ಕರ ವಸೂಲಿ ಮಾಡಬೇಕು. ದೊಡ್ಡ ಉದ್ಯಾನಗಳಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿದರೆ ಆದಾಯ ಹೆಚ್ಚಳವಾಗಲಿದೆಪ್ರೇಮನಾಥ ಚಿಕ್ಕತುಂಬಳ ಮುಖಂಡ ವ್ಯಾಪಾರಸ್ಥರ ಸಂಘ
ಸಾರ್ವಜನಿಕರ ಸಹಕಾರ ಅಗತ್ಯ
‘ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನವಾಗಲು ಸಾರ್ವಜನಿಕರ ಸಹಕಾರ ಅಗತ್ಯ. ಆದರೆ ಅವರ ಅಸಹಕಾರದಿಂದ ನಾವು ದಬ್ಬಾಳಿಕೆಗೆ ಒಳಗಾಗುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಬೇಸರ ವ್ಯಕ್ತಪಡಿಸಿದರು. ‘ಮಹಾನಗರ ಪಾಲಿಕೆ ಎಂದರೆ ಎಲ್ಲರೂ ಬೇರೆಯದ್ದೇ ಭಾವನೆ ಹೊಂದಿದ್ದಾರೆ. ಪ್ರತಿಯೊಂದು ಉಚಿತವಾಗಿ ಸಿಗಬೇಕೆಂದು ಬಯಸುತ್ತಾರೆ. ನಿಯಮಾವಳಿ ಪ್ರಕಾರ ಕ್ರಮಕ್ಕೆ ಅಥವಾ ಯಾವುದಾದರೂ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ನೂರಾರು ಮಂದಿ ಪ್ರತಿಭಟಿಸುತ್ತಾರೆ. ಹೀಗಾದರೆ ಆದಾಯ ಎಲ್ಲಿಂದ ತರಬೇಕು’ ನಾವು ಅಸಹಾಯಕರಾಗಿದ್ದೇವೆ’ ಎಂದರು. ‘ಖಾಸಗಿ ಈಜುಕೊಳದವರು ತಾಸಿಗೆ ₹700–₹800 ಶುಲ್ಕ ವಿಧಿಸುತ್ತಾರೆ. ನಮ್ಮ ಈಜುಕೊಳದಲ್ಲಿ ₹100 ಮಾತ್ರ ಇದೆ. ಅದನ್ನು ನೀಡಲು ಸಹ ಅಲ್ಲಿಯ ಸಿಬ್ಬಂದಿ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಸಿಬ್ಬಂದಿ ಕೊರತೆಯಿಂದಾಗಿ ನಿಯಮಾವಳಿ ಉಲ್ಲಂಘಿಸಿದವರ ವಿರುದ್ಧ ದಂಡ ಹಾಕಲು ಸಾಧ್ಯವಾಗುತ್ತಿಲ್ಲ. ಜನತಾ ಬಜಾರ್ ಮೀನು ಮಾರುಕಟ್ಟೆಯ ಮಳಿಗೆ ಹಂಚಿಕೆಗೆ ಮುರು–ನಾಲ್ಕು ಬಾರಿ ಸಭೆ ಕರೆಯಲಾಗಿತ್ತು. ಕೆಲವರು ಕೋರ್ಟ್ ಮೊರೆ ಹೋಗಿ ತಡೆ ತಂದರು. ಅದನ್ನು ತೆರವು ಮಾಡಿದ ನಂತರವೂ ಮಳಿಗೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.