ADVERTISEMENT

ಹು–ಧಾ ಮಹಾನಗರ ಪಾಲಿಕೆ ಅಧಿಕಾರಿ ಅಮಾನತು

ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:15 IST
Last Updated 1 ನವೆಂಬರ್ 2022, 6:15 IST

ಹುಬ್ಬಳ್ಳಿ: ಪದವಿ ಪಾಸಾಗಿರುವ ಕುರಿತು ನಕಲಿ ಅಂಕಪಟ್ಟಿ ನೀಡಿ ಹು–ಧಾ ಮಹಾನಗರ ಪಾಲಿಕೆಯಲ್ಲಿ ಸಾಂಖ್ಯಿಕ ಅಧಿಕಾರಿಯಾಗಿ ಮುಂಬಡ್ತಿ ಪಡೆದ ವಸಂತ ಅಣ್ಣಿಗೇರಿ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಸಂತ ಅವರು ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಸಾಂಖ್ಯಿಕ ಅಧಿಕಾರಿಯಾಗಿ 2016 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹುದ್ದೆಗೆ ಮುಂಬಡ್ತಿ ಪಡೆಯುವಾಗ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರುವ ಕುರಿತು ಅಂಕಪಟ್ಟಿಯನ್ನು ಬೆಂಗಳೂರಿನ ಎಂ.ಎಸ್‌. ಬಿಲ್ಡಿಂಗ್‌ನಲ್ಲಿರುವ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಕ್ಕೆ ಸಲ್ಲಿಕೆ ಮಾಡಿದ್ದರು. ಇತ್ತೀಚೆಗೆ ಅಂಕಪಟ್ಟಿ ಪರಿಶೀಲನೆಗೆ ಒಳಪಡಿಸಿದಾಗ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಪಾಲಿಕೆ ಆಯುಕ್ತರ ಜೊತೆ ಈ ಕುರಿತು ಚರ್ಚಿಸಿದ್ದು, ಈಗಾಗಲೇ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಇಲಾಖೆ ವಿಚಾರಣೆ ಕಾಯ್ದಿರಿಸಿ, ಮುಂಬಡ್ತಿ ಹಿಂಪಡೆದಿರುವುದಾಗಿಯೂ ತಿಳಿಸಿದ್ದಾರೆ’ ಎಂದು ಧಾರವಾಡ ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಸಾಯಿಕುಮಾರ ಹಿಳ್ಳಿ ತಿಳಿಸಿದ್ದಾರೆ.

ADVERTISEMENT

₹1.09 ಲಕ್ಷ ವಂಚನೆ: ನಗರದ ದುರ್ಗದ ಬೈಲ್‌ನಲ್ಲಿರುವ ಸಂತೋಷ ಆಭರಣ ಅಂಗಡಿಗೆ ಬಂದು ಚಿನ್ನ ಖರೀದಿಸಿದ ವ್ಯಕ್ತಿಯೊಬ್ಬ, ಫೋನ್‌ ಪೇ ಮೂಲಕ ಹಣ ವರ್ಗಾಯಿಸಿರುವುದಾಗಿ ಹೇಳಿ ಅಂಗಡಿ ಮಾಲೀಕರಿಗೆ ₹1.09 ಲಕ್ಷ ವಂಚಿಸಿದ್ದಾನೆ.ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಸ್ಕ್‌ ಧರಿಸಿ ಬಂದ ವ್ಯಕ್ತಿತಾನು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾನೆ. ಅಂಗಡಿಯ ಸಿಬ್ಬಂದಿ ಚಿನ್ನಾಭರಣ ತೋರಿಸಿದಾಗ, ಒಂದು ಸರ ಆಯ್ಕೆ ಮಾಡಿ ಫೋನ್ ಪೇ ಮೂಲಕ ಹಣ ವರ್ಗಾಯಿಸುವುದಾಗಿ ನಂಬಿಸಿ ದೂರವಾಣಿ ಸಂಖ್ಯೆ ಪಡೆದಿದ್ದ. ನಕಲಿ ಸಂದೇಶ ಕಳುಹಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಬಂಧನ: ನಗರದ ವಿವಿಧೆಡೆ ಮನೆ ಹಾಗೂ ಬೈಕ್‌ ಕಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ₹2.76 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಬೈಕ್‌ ವಶಪಡಿಸಿಕೊಂಡಿದ್ದಾರೆ.

ಹೆಗ್ಗೇರಿಯ ಖಾಜಾಸಾಬ್‌ ಬಡಿಗೇರ ಬಂಧಿತ ಆರೋಪಿ. ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಮತ್ತು ಬೈಕ್‌, ಕಸಬಾ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಹಾಗೂ ಕುಂದಗೋಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣದಲ್ಲಿ ಆರೋಪಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ವಂಚನೆ; ಪ್ರಕರಣ ದಾಖಲು:ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಸ್ಥಳೀಯ ನಿವಾಸಿ ಶ್ವೇತಾ ಅವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರ ಬಳಿಯಿದ್ದ ₹2.51 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಮೊಬೈಲ್‌ ಫೋನ್‌ ದೋಚಿ ಪರಾರಿಯಾಗಿದ್ದಾನೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ನಿವಾಸಿ ಶ್ವೇತಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದಧಾರವಾಡ ನಿವಾಸಿ ಅರವಿಂದ, ಕೆಲಸ ಕೊಡಿಸುವುದಾಗಿ ಹೇಳಿ ಅವರನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾನೆ. ಸಿದ್ಧಾರೂಢ ರೈಲ್ವೆ ನಿಲ್ದಾಣದ ಬಳಿ ಮಹಿಳೆಗೆ ಜೀವ ಬೆದರಿಕೆ ಹಾಕಿ, ಮಾಂಗಲ್ಯ ಸರ, ಕಿವಿಯೊಲೆ, ₹ 15 ಸಾವಿರ ನಗದು ಹಾಗೂ ₹10 ಸಾವಿರ ಮೌಲ್ಯದ ಮೊಬೈಲ್‌ ದೋಚಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.