ADVERTISEMENT

ಹುಬ್ಬಳ್ಳಿ | ಹೆಚ್ಚಿದ ಅಪಘಾತ ಪ್ರಕರಣ ಸಂಖ್ಯೆ: ಗಂಭೀರ ಗಾಯ ಪ್ರಕರಣ ಏರುಗತಿಯತ್ತ

ಕಲಾವತಿ ಬೈಚಬಾಳ
Published 11 ಡಿಸೆಂಬರ್ 2024, 5:00 IST
Last Updated 11 ಡಿಸೆಂಬರ್ 2024, 5:00 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿರುವವರ ಮತ್ತು ಗಂಭೀರವಾಗಿ ಗಾಯಗೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ADVERTISEMENT

ಉತ್ತರ ಕರ್ನಾಟಕ ಭಾಗದ ಬಹುತೇಕ ಜನರು ಚಿಕಿತ್ಸೆಗಾಗಿ ಕೆಎಂಸಿ–ಆರ್‌ಐಗೆ ಬರುತ್ತಿದ್ದು, ದಿನವೊಂದಕ್ಕೆ ತುರ್ತು ಚಿಕಿತ್ಸಾ ವಿಭಾಗದಲ್ಲಿ 250 ಜನರು ದಾಖಲಾಗುತ್ತಿದ್ದಾರೆ. ಅಪಘಾತದಿಂದ ಬೆನ್ನುಮೂಳೆ ಮತ್ತು ತಲೆಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿವೆ.

2023ರಲ್ಲಿ 4,134 ಹಾಗೂ ಪ್ರಸಕ್ತ ವರ್ಷ (ಸೆಪ್ಟೆಂಬರ್‌ ವರೆಗೆ) 3,426 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.

‘ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವೈಜ್ಞಾನಿಕವಾಗಿ ಸಿದ್ಧಪಡಿಸುವ ವಿಸ್ತೃತ ಯೋಜನಾ ವರದಿಗಳಿಂದ ಹೆದ್ದಾರಿಗಳಲ್ಲಿ ಬ್ಲಾಕ್‌ ಸ್ಪಾಟ್‌ (ಅಪಘಾತ ವಲಯ) ಸಂಖ್ಯೆ ಹೆಚ್ಚುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಈಚೆಗೆ ಹೇಳಿದ್ದರು. 

‘ದೇಶದಲ್ಲಿ ವಾರ್ಷಿಕವಾಗಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಮೃತಪಡುತ್ತಿದ್ದಾರೆ. 3 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇ 3ರಷ್ಟು ನಷ್ಟವಾಗುತ್ತಿದೆ’ ಎಂದೂ ತಿಳಿಸಿದ್ದರು.

ರಾಜ್ಯದಲ್ಲಿ ಕಳೆದ ಜುಲೈ ತಿಂಗಳ ಅಂತ್ಯದ ವರೆಗೆ ಒಟ್ಟು 6,797 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ವರ್ಷ 7,233 ಜನ ಮೃತಪಟ್ಟಿದ್ದರು. 2023ರಲ್ಲಿ ಒಟ್ಟು 12,332 ಸಾವುಗಳು ರಸ್ತೆಯಲ್ಲಿ ಸಂಭವಿಸಿವೆ.

‘ಕಳೆದ ಎರಡ್ಮೂರು ವರ್ಷಗಳಲ್ಲಿ ತಲೆ ಮತ್ತು ಬೆನ್ನುಹುರಿ ಸಮಸ್ಯೆಗಳಿಂದ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾದ ವೇಗದ ಚಾಲನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬಹುಮಹಡಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಕಟ್ಟಡ ಕುಸಿತದಿಂದ ಮೃತಪಡುತ್ತಿರುವವರ ಮತ್ತು ತಲೆ ಮತ್ತು ಬೆನ್ನಿಗೆ ಬಲವಾದ ಪೆಟ್ಟುಗಳಾಗುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ’ ಎಂದು ಹುಬ್ಬಳ್ಳಿಯ ಕೆಎಂಸಿ–ಆರ್‌ಐನ ನರರೋಗ ತಜ್ಞ ಡಾ. ಗುರುಪಾದಪ್ಪ ಸಿ. ಪರಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನರರೋಗ ವಿಭಾಗದಲ್ಲಿ ತಿಂಗಳಿಗೆ ಅಂದಾಜು 170 ಜನ ದಾಖಲಾಗುತ್ತಿದ್ದು, 40 ರಿಂದ 50 ಗಂಭೀರ ಸ್ವರೂಪದ ಮತ್ತು 30 ಅತೀ ಗಂಭೀರ ಸ್ವರೂಪದ ಗಾಯಗಳಾದವರು ದಾಖಲಾಗುತ್ತಿದ್ದಾರೆ. ಮದ್ಯ ಸೇವನೆಯಿಂದ ಬಿದ್ದು, ಗಾಯಗೊಂಡು, ಚಿಕಿತ್ಸೆಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದರು.

‘ಅಪಘಾತದಲ್ಲಿ ತಲೆಗೆ ಪೆಟ್ಟಾದ ವ್ಯಕ್ತಿಯನ್ನು ಶೀಘ್ರವೇ ಆಸ್ಪತ್ರೆಗೆ ದಾಖಲಿಸಲು ಜನರು ಮುಂದಾಗಬೇಕು. ವ್ಯಕ್ತಿಯು ಬಿದ್ದಾಗ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತು ಸರ್ಕಾರ ಯೋಜನೆಗಳನ್ನು ರೂಪಿಸಿ, ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ರಸ್ತೆ ಅಪಘಾತ ಮತ್ತಿತರ ಕಾರಣಗಳಿಂದ ತಲೆಗೆ ಗಂಭೀರವಾಗಿ ಗಾಯಗೊಂಡು ಕೆಎಂಸಿ–ಆರ್‌ಐನಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಪ್ರತಿ ವರ್ಷ ಏರುತ್ತಲೇ ಇದೆ. ವರ್ಷಕ್ಕೆ ಅಂದಾಜು 1000 ಜನ ದಾಖಲಾಗುತ್ತಾರೆ
ಡಾ. ಪ್ರಭು ವೈದ್ಯಕೀಯ ದಾಖಲೆಗಳ ಅಧಿಕಾರಿ ಕೆಎಂಸಿ–ಆರ್‌ಐ

‘ಸಮನ್ವಯತೆ ಕೊರತೆ’

‘ಕೆಎಂಸಿ–ಆರ್‌ಐನಲ್ಲಿ ದಿನಕ್ಕೆ ಅಂದಾಜು 1200 ಜನ ನೋಂದಣಿಯಾಗುತ್ತಿದ್ದಾರೆ. ಪಿಎಚ್‌ಸಿ ಸಿಎಚ್‌ಸಿ ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳ ಮಧ್ಯೆ ಸಮನ್ವಯತೆ ಕೊರತೆಯಿದೆ. ಸಣ್ಣಸಣ್ಣ ಪ್ರಕರಣಗಳನ್ನು ಕೆಎಂಸಿ–ಆರ್‌ಐಗೆ ರೆಫರ್‌ ಮಾಡುತ್ತಿರುವುದರಿಂದ ಇಲ್ಲಿ ಜನ ದಟ್ಟಣೆಯಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಲ್ಲಿಯೂ ತೊಂದರೆ ಎದುರಾಗುತ್ತಿದೆ. ವೈದ್ಯರ ನಡುವೆ ಸಮನ್ವಯತೆ ಸಾಧಿಸಲು ತಾಂತ್ರಿಕತೆಯ ಅಗತ್ಯವಿದೆ. ಆ್ಯಪ್‌ ಅಭಿವೃದ್ಧಿಪಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹುಬ್ಬಳ್ಳಿಯ ಕೆಎಂಸಿ–ಆರ್‌ಐನ ನರರೋಗ ತಜ್ಞ ಡಾ. ಗುರುಪಾದಪ್ಪ ಸಿ. ಪರಪ್ಪನವರ ಅಭಿಪ್ರಾಯಪಟ್ಟರು.

‘ನಗರದಲ್ಲಿ ತಗ್ಗಿದ ಅಪಘಾತಗಳು’

‘ಹು–ಧಾ ನಗರ ವ್ಯಾಪ್ತಿಯಲ್ಲಿ ಮಾರಣಾಂತಿಕವಲ್ಲದ ಅಪಘಾತಗಳ ಸಂಖ್ಯೆ ಕಡಿಮೆ ಇದೆ. ಸಂಚಾರ ವಿಭಾಗದ ಪೊಲೀಸ್‌ ಸಿಬ್ಬಂದಿ ಶಾಲೆ ಕಾಲೇಜುಗಳಲ್ಲಿ ಆಟೊ ಚಾಲಕರಿಗೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಹಾಗಾಗಿ ಅಪಘಾತ ಸಂಖ್ಯೆ ತಗ್ಗಿದೆ’ ಎಂದು ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.