ADVERTISEMENT

ನೈರುತ್ಯ ರೈಲ್ವೆಯಲ್ಲಿ ಕಾಗದರಹಿತ ಸೇವೆ

ಸೇವೆಗೆ ಚಾಲನೆ ನೀಡಿದ ಅಜಯ ಕುಮಾರ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:56 IST
Last Updated 12 ಫೆಬ್ರುವರಿ 2020, 9:56 IST
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿಯಲ್ಲಿ ಕಾಗದರಹಿತ ಇ–ಕಚೇರಿಗೆ ಸೇವೆಗೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್‌ ಸಿಂಗ್‌ ಚಾಲನೆ ನೀಡಿದರು
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿಯಲ್ಲಿ ಕಾಗದರಹಿತ ಇ–ಕಚೇರಿಗೆ ಸೇವೆಗೆ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್‌ ಸಿಂಗ್‌ ಚಾಲನೆ ನೀಡಿದರು   

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ಮುಖ್ಯಕಚೇರಿ, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗೀಯ ಕಚೇರಿಗಳು ಕಾಗದರಹಿತ ಸೇವೆ ಅಳವಡಿಸಿಕೊಂಡಿವೆ.

ಮೊದಲ ಹಂತದಲ್ಲಿ ರೈಲ್ವೆ ಕಚೇರಿಗಳನ್ನು ಕಾಗದ ರಹಿತಗೊಳಿಸುವ ಒಪ್ಪಂದಕ್ಕೆ 2019ರ ಮಾರ್ಚ್‌ನಲ್ಲಿ ಇಲಾಖೆಯು ರೈಲ್‌ಟೆಲ್‌ ಕಾರ್ಪೊರೇಷನ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. 2020ರ ಮಾರ್ಚ್ ಒಳಗೆ ಕಾರ್ಯ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದರೆ, ನಿಗದಿತ ಅವಧಿಗೂ ಮುನ್ನವೇ ಪೂರ್ಣಗೊಂಡಿದೆ.

ಎರಡನೇ ಹಂತದಲ್ಲಿ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗೀಯ ಕಚೇರಿಗಳ ಡಿಜಿಟಲೀಕರಣಕ್ಕೆ 2020ರ ಜನವರಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 15 ದಿನಗಳಲ್ಲಿಯೇ ಈ ಕಾರ್ಯ ಪೂರ್ಣಗೊಂಡಿದೆ. ಹಳೆಯ ಕಡತಗಳ ಸ್ಕ್ಯಾನಿಂಗ್‌, ಡಿಜಟಲೀಕರಣ ಪ್ರಕ್ರಿಯೆ ನಡೆದು 2,880ಕ್ಕೂ ಹೆಚ್ಚು ಕಡತಗಳನ್ನು ಡಿಜಿಟಲ್‌ ಕಡತಗಳಾಗಿ ಪರಿವರ್ತಿಸಲಾಗಿದೆ.

ADVERTISEMENT

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಹಯೋಗದಲ್ಲಿ ಇ–ಕಚೇರಿ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೂ ದಕ್ಷಿಣ ಮಧ್ಯೆ ರೈಲ್ವೆ (ಎಸ್‌ಸಿಆರ್‌) ಮಾತ್ರ ಕಾಗದರಹಿತ ಸೇವೆ ಅಳವಡಿಸಿಕೊಂಡಿತ್ತು. ಈಗ ಅದರ ಸಾಲಿಗೆ ನೈರುತ್ಯ ರೈಲ್ವೆ ಕೂಡ ಸೇರ್ಪಡೆಯಾಗಿದೆ.

ವಲಯ ಮುಖ್ಯಕಚೇರಿ ಒಳಗೊಂಡಂತೆ ನಾಲ್ಕೂ ವಿಭಾಗಗಳಲ್ಲಿ ರೈಲ್‌ಟೆಲ್‌ (ರೈಲುಗಳ ಕಾರ್ಯಾಚರಣೆ ಹಾಗೂ ಆಡಳಿತ, ಸಂಪರ್ಕದ ಸುಧಾರಿತ ವ್ಯವಸ್ಥೆ) ಮೂಲಕ ಕಡತಗಳ ದಾಖಲೀಕರಣ, ಹೊಸ ಕಡತಗಳ ರಚನೆ, ನಕ್ಷೆಗಳು ಹಾಗೂ ದತ್ತಾಂಶವನ್ನು ಇ–ಕಚೇರಿ ವ್ಯವಸ್ಥೆಗೆ ಅಳವಡಿಸಲಾಗಿದೆ. ಇಲಾಖೆಗಳ ನಡುವಿನ ಆಂತರಿಕ ವಹಿವಾಟು, ವ್ಯವಹಾರದಲ್ಲಿ ಪರಿಣಾಮಕಾರಿ, ರಚನಾತ್ಮಕ ಹಾಗೂ ಪಾರದರ್ಶಕತೆ ಕಾಪಾಡಲು ಕಾಗದರಹಿತ ಸೇವೆ ಅನುಕೂಲ ಒದಗಿಸುತ್ತದೆ.

ಈ ಕುರಿತು ಮಾತನಾಡಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌, ‘ರೈಲ್ವೆಯಲ್ಲಿ ಕಡತಗಳ ನಿರ್ವಹಣೆಯನ್ನು ಹೆಚ್ಚು ನಿಖರ ಹಾಗೂ ಪರಿಣಾಮಕಾರಿಗೊಳಿಸಲು ಇ–ಕಚೇರಿ ವ್ಯವಸ್ಥೆ ಆರಂಭಿಸಲಾಗಿದೆ. ಇದರಿಂದ ಕಡತಗಳ ತ್ವರಿತ ವಿಲೇವಾರಿ ಸುಲಭವಾಗಲಿದೆ’ ಎಂದರು.

ರೈಲ್‌ಟೆಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶಾ. ಪುನೀತ್‌ ಚಾವ್ಲಾ ‘ಕೈ ಬರಹದಲ್ಲಿದ್ದ ವ್ಯವಸ್ಥೆಯನ್ನು ಡಿಜಿಟಲ್‌ ವ್ಯವಸ್ಥೆಗೆ ಮಾರ್ಪಡಿಸುವುದು ಸವಾಲಿನ ಕೆಲಸವಾಗಿತ್ತು. ರೈಲ್ವೆಯ ಕಾರ್ಯವೇಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸವಾಲು ಮೆಟ್ಟಿ ನಿಂತಿದ್ದೇವೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.