ADVERTISEMENT

ಹುಬ್ಬಳ್ಳಿ| ಪತ್ರಕರ್ತರಿಗೆ ಆರೋಗ್ಯವಿಮೆ: ಮೇಯರ್‌ ಜ್ಯೋತಿ ಪಾಟೀಲ

ಪತ್ರಕರ್ತರ ಸಂಘದಿಂದ ರಂಗೋಲಿ, ಅಡುಗೆ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:52 IST
Last Updated 2 ಮಾರ್ಚ್ 2026, 6:52 IST
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಹುಬ್ಬಳ್ಳಿ: ‘ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಸ್ತುತ ವರ್ಷ ಮಂಡಿಸಲಿರುವ ಬಜೆಟ್‌ನಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಘೋಷಣೆ ಮಾಡಲು ಯೋಜಿಸಲಾಗಿದೆ. ಪಾಲಿಕೆ ವತಿಯಿಂದ ಪತ್ರಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಮೂರುಸಾವಿರಮಠದ ಮೂಜಗಂ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ‘ಮಹಿಳೆಯರಿಗೆ ರಂಗೋಲಿ ಹಾಗೂ ಅಡುಗೆ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಅವರಲ್ಲಿರುವ ಸೃಜನಶೀಲತೆಯನ್ನು ಹೊರಹಾಕಲು ಯತ್ನಿಸಿದ ಕಾರ್ಯ ಶ್ಲಾಘನೀಯ. ಸುದ್ದಿಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ಮಹಿಳಾ ಪತ್ರಕರ್ತರಿಗೆ, ಇಂತಹ ಕಾರ್ಯಕ್ರಮ ಹೊಸತನ ನೀಡಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಾತನಾಡಿ, ‘ಇಂದಿನ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿದ್ದಾಳೆ. ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗಟ್ಟಿಯಾಗಿ ನೆಲೆಯೂರಿ, ಅಸಾಮಾನ್ಯ ಸಾಧನೆ ಮಾಡುತ್ತಿದ್ದಾಳೆ’ ಎಂದರು.

ಪತ್ರಕರ್ತರ ಸಂಘದ ಖಜಾಂಚಿ ತನುಜಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ರಂಗೋಲಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿರ್ಣಾಯಕರಾಗಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೋಟಿಯವರ, ಸವಿತಾ ಬೆಣಗಿ, ಕಾಶಿಬಾಯಿ ಕ್ಯಾಡಗಿ ಮತ್ತು ಅಕ್ಕಮ್ಮ ಒಡಕಪ್ಪನವರ ಪಾಲ್ಗೊಂಡಿದ್ದರು.

ಸ್ಪರ್ಧೆಯ ವಿಜೇತರು...

ರಂಗೋಲಿ ಸ್ಪರ್ಧೆ: ವೀಣಾ ಚಳಗೇರಿ (ಪ್ರಥಮ) ಅನುಷಾ ಕಮತರ (ದ್ವಿತೀಯ) ಚೈತನ್ಯಾದೇವಿ ಗುದಗಯ್ಯನವರಮಠ (ತೃತೀಯ) ವಿಜಯಲಕ್ಷ್ಮಿ ಪತ್ತಾರ ವೀಣಾ ಕುಂಬಾರ ರೋಹಿಣಿ ಅಂಗಡಿ ಲಲಿತಾ ಹೂಗಾರ ಹಾಗೂ ರೂಪಾ ಗೊಂಬಿ (ಸಮಾಧಾನಕರ ಬಹುಮಾನ).

ಅಡುಗೆ ಸ್ಪರ್ಧೆ: ಶುಭಾ ಹೆಗಡೆ (ಪ್ರಥಮ) ಸುನಂದಾ ಮೆಣಸಿನಕಾಯಿ (ದ್ವಿತೀಯ) ಲಲಿತಾ ಹೂಗಾರ (ತೃತೀಯ) ರೂಪಾ ಕಣವಿ ಸಾವಿತ್ರಿ ಶಿವಪುರ ವೇದಾ ಕಮತರ ಮಂಜುಳಾ ಹುಲಕೊಪ್ಪ ಕವಿತಾ ಬಡಿಗೇರ (ಸಮಾಧಾನಕರ ಬಹುಮಾನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.