ADVERTISEMENT

ಪರಿಶ್ರಮ, ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ: ಹೈಕೋರ್ಟ್‌ ನ್ಯಾ. ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:26 IST
Last Updated 14 ಫೆಬ್ರುವರಿ 2026, 7:26 IST
ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಮಾತನಾಡಿದರು
ಧಾರವಾಡದ ಸರ್‌ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಮಾತನಾಡಿದರು   

ಧಾರವಾಡ: ‘ಇಂದಿನ ಆಧುನಿಕ, ಸ್ಪರ್ಧಾ ಯುಗದ ನ್ಯಾಯ ವ್ಯವಸ್ಥೆಯಲ್ಲಿ ಅವಕಾಶಗಳು ದಿನನಿತ್ಯ ವಿಸ್ತಾರಗೊಳ್ಳುತ್ತಿವೆ. ಪರಿಶ್ರಮ, ಸತತ ಅಧ್ಯಯನದಿಂದ ಯಶಸ್ಸು ಸಾಧಿಸಬಹುದು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದರು.

ಸರ್‌ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದ ಸಭಾಂಗಣದಲ್ಲಿ ಈಚೆಗೆ ನಡೆದ ವಕೀಲ ಐ.ಜಿ.ಹಿರೇಗೌಡರ ಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಶ್ವದ ಬಹುತೇಕ ಕಡೆ ನಾಗರಿಕತೆಯೇ ವಿಕಾಸಗೊಳ್ಳದಿದ್ದಾಗ ನಮ್ಮ ದೇಶದಲ್ಲಿ ನ್ಯಾಯದಾನ ಮಾಡುವ ‘ನ್ಯಾಯದ ಗಂಟೆ’ ವ್ಯವಸ್ಥೆ ಇತ್ತು. ಉಜ್ಜಯಿನಿಯಲ್ಲಿ ರೂಪುಗೊಂಡಿದ್ದ ರಾಜಾ ವಿಕ್ರಮಾದಿತ್ಯನ ನ್ಯಾಯಪೀಠ ಆ ಕಾಲದಲ್ಲಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ, ಪರಕೀಯರ ಆಡಳಿತದ ಪರಿಣಾಮದಿಂದ ವಿದೇಶಿ ನ್ಯಾಯವ್ಯವಸ್ಥೆ ಬಗ್ಗೆ ವ್ಯಾಮೋಹ ಬೆಳೆಸಿಕೊಂಡು ನಮ್ಮ ಪರಂಪರೆ ಮತ್ತು ಅಸ್ಮಿತೆ ಮರೆಯುತ್ತಿದ್ದೇವೆ. ಭಾರತೀಯ ನ್ಯಾಯದಾನ ಪದ್ಧತಿ ಬಗ್ಗೆ ಅಭಿಮಾನ ಹೊಂದಿ ಅನುಸರಿಸುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದರು.

ADVERTISEMENT

‘ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಐ.ಜಿ.ಹಿರೇಗೌಡರ ಅವರು ‘ಕಾನೂನು ಕ್ಷೇತ್ರದ ಭೀಷ್ಮ’ ಎಂದೆನಿಸಿಕೊಳ್ಳಲು ಅವರ ವೃತ್ತಿನಿಷ್ಠೆ ಕಾರಣ. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು’ ಎಂದರು

ಸಿಂಡಿಕೇಟ್‌ ಸದಸ್ಯ ರಾಬರ್ಟ್‌ ದದ್ದಾಪುರಿ ಮಾತನಾಡಿ, ‘ಐ. ಜಿ. ಹಿರೇಗೌಡರ ಅವರು ಬೈಬಲ್ ಮತ್ತು ವಚನ ಸಾಹಿತ್ಯದ ಬಗ್ಗೆ ಆಳ ಅಧ್ಯಯನ ಮಾಡಿದ್ದರು. ಇದೇ ಕಾಲೇಜಿನಲ್ಲಿ ಅವರು 34 ವರ್ಷ ಬೋಧನೆ ಮಾಡಿದರು’ ಎಂದರು.

ಕಾಲೇಜು ಪ್ರಾಚಾರ್ಯೆ ಪ್ರೊ.ಎಸ್. ಆರ್. ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿ.ವಿ. ಆಡಳಿತಾಂಗ ಕುಲಸಚಿವ ಶಂಕರಪ್ಪ ವಣಿಕ್ಯಾಳ, ವಕೀಲರಾದ ಕೆ.ಬಿ.ನಾವಲಗಿಮಠ, ಕೆ.ಎಲ್.ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.