ADVERTISEMENT

ಹಿಜಾಬ್ ನಿಷೇಧ ವಾಪಸ್‌ | ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 14:53 IST
Last Updated 24 ಡಿಸೆಂಬರ್ 2023, 14:53 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರೀತಿ ಮಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರ ಇದ್ದಾಗ ಹಿಜಾಬ್‌ ನಿಷೇಧ ಮಾಡಿರಲಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಈ ರೀತಿ ಹೇಳಿದರೆ ಅದು ಸಮಾಜಕ್ಕೆ ಬಗೆಯುತ್ತಿರುವ ದ್ರೋಹ. ಗೊತ್ತಿಲ್ಲ ಎಂದಾದರೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ’ ಎಂದರು.

‘ಹಿಜಾಬ್ ನಿಷೇಧ ಎಂದರೆ ಅದನ್ನು ಧರಿಸಿ ಎಲ್ಲಿಯೂ ಓಡಾಡುವಂತಿಲ್ಲ. ಹಿಜಾಬ್‌ ಯಾವಾಗ ನಿಷೇಧವಾಗಿದೆ?  ಸಿದ್ದರಾಮಯ್ಯ ಮೂರ್ಖರ ರೀತಿ ಮಾತನಾಡಿದ್ದಾರೆ. ಸಮುದಾಯಗಳ ನಡುವೆ ಜಗಳ ಹಚ್ಚಿ, ತುಷ್ಟೀಕರಣ ಮಾಡಿ ಮುಸ್ಲಿಮರ ಮತಗಳನ್ನು ಪಡೆಯುವ ಹುನ್ನಾರ ಇದರ ಹಿಂದೆ ಇದೆ. ಈ ಷಡ್ಯಂತ್ರಕ್ಕೆ ಮುಸ್ಲಿಮರು ಬಲಿಯಾಗಬಾರದು’ ಎಂದು ಹೇಳಿದರು.

ADVERTISEMENT

‘ಸಂಸತ್‌ನಲ್ಲಿ ಸ್ಮೋಕ್‌ ಕ್ಯಾನ್‌’ ಹಾರಿಸಿದ ಘಟನೆ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ. ಆದರೂ ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‌ನವರು ಕಲಾಪ ನಡೆಯಲು ಬಿಡಲಿಲ್ಲ. ಪಂಚರಾಜ್ಯಗಳ ಚುನಾವಣೆ ಸೋಲಿನ ಸಿಟ್ಟನ್ನು ಈ ರೀತಿ ತೀರಿಸಿಕೊಂಡಿದ್ದಾರೆ’ ಎಂದರು.

ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ‘ಈ ಕ್ಷೇತ್ರದಿಂದ ಹಿಂದೆಯೂ ಜನ ಆಶೀರ್ವಾದ ಮಾಡಿದ್ದರು. ಮುಂದೆಯೂ ಮಾಡುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.