ಹುಬ್ಬಳ್ಳಿ: ಸಹಕಾರಿ ಸಂಘಗಳನ್ನು ತೆರಿಗೆ ಮುಕ್ತ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಜ. 10ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪಾದಯಾತ್ರೆ ಹಾಗೂ ಪ್ರತಿಭಟನೆ ಹಮ್ಮಿಕೊಂಡಿದೆ.
ಮಹಾಮಂಡಳದ ನಿರ್ದೇಶಕ ಡಾ. ಸಂಜಯ ಪಿ. ಹೊಸಮಠ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ, ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ, ಬೆಂಗಳೂರು ಮತ್ತು ದೆಹಲಿಯಲ್ಲಿಯೂ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಸಹಕಾರಿ ಸಂಘಗಳು ಎಷ್ಟೇ ವಹಿವಾಟು ನಡೆಸಿದರೂ ಶೇ 33ರಷ್ಟು ತೆರಿಗೆ ಕಟ್ಟಬೇಕು. ಆದ್ದರಿಂದ ಆಯಾ ಸಂಘಗಳ ವಹಿವಾಟಿನ ಆಧಾರದ ಮೇಲೆ ತೆರಿಗೆ ನಿರ್ಧರಿಸಲು ಪದ್ಧತಿ ಜಾರಿಗೆ ಬರಬೇಕು. ಇಲ್ಲವಾದರೆ ದೇಶದಲ್ಲಿರುವ ಆರು ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳು ಮುಚ್ಚುವ ಪರಿಸ್ಥಿತಿಗೆ ಬರುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ನಾವು ಸಾಲ ನೀಡುವುದು ಸದಸ್ಯರಿಗೆ ಮಾತ್ರ. ಬಹಳಷ್ಟು ಸಹಕಾರಿ ಸಂಘಗಳು ಸಂಕಷ್ಟದಲ್ಲಿವೆ. ಆದರೂ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿನಾಕಾರಣ ಸಂಘಗಳ ಮೇಲೆ ಗಧಾಪ್ರಹಾರ ಮಾಡುತ್ತಿವೆ’ ಎಂದು ಆರೋಪಿಸಿದರು.
ಮಹಾಮಂಡಳದ ಸದಸ್ಯ ಗುರುರಾಜ ಹುಣಸಿಮರದ ಮಾತನಾಡಿ ‘ನೋಟು ಅಮಾನ್ಯೀಕರಣದ ಬಳಿಕ ಸಂಘದ ಸದಸ್ಯರಿಂದ ಹಣ ತುಂಬಿಸಿಕೊಂಡಿದ್ದಕ್ಕೆ ಜಿಲ್ಲೆಯ ಸಹಕಾರಿ ಸಂಘವೊಂದಕ್ಕೆ ಆದಾಯ ತೆರಿಗೆ ಅಧಿಕಾರಿಗಳು ₹19 ಕೋಟಿ ದಂಡ ಹಾಕಿದ್ದಾರೆ. ಇದೇ ರೀತಿ ಅನೇಕ ಸಂಘಗಳಿಗೂ ಸಮಸ್ಯೆಯಾಗಿದೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗುವುದು‘ ಎಂದರು.
ಮಹಾಮಂಡಳದ ಪದಾಧಿಕಾರಿಗಳಾದ ಹಿತೇಶ ಕುಮಾರ ಮೋದಿ, ತಮ್ಮಣ್ಣ ಕೆಂಚರಡ್ಡಿ, ಎ.ಬಿ. ಉಪ್ಪಿನ, ಗುರುಸಿದ್ದಯ್ಯ ಯಕಲಾಸಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.