ADVERTISEMENT

27ರಿಂದ ಗೋವಾದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ

ಹಿಂದೂ ಜನಜಾಗೃತಿ ಸಮಿತಿಯಿಂದ 11ದಿನ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:20 IST
Last Updated 20 ಮೇ 2019, 13:20 IST

ಹುಬ್ಬಳ್ಳಿ: ಹಿಂದೂ ಸಂಘಟನೆಗಳ ಬಲ ಹೆಚ್ಚಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಮೇ 27ರಿಂದ ಜೂ. 8ರ ವರೆಗೆ ಗೋವಾದ ಪೋಂಡಾದ ರಾಮನಾಥ ದೇವಸ್ಥಾನದಲ್ಲಿ 8ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹಮ್ಮಿಕೊಂಡಿದೆ.

ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಹಿಂದೆ ನಡೆಸಿದ ಏಳು ಅಧಿವೇಶನಗಳಿಂದಾಗಿ ದೇಶದಲ್ಲಿ ಈಗ ಹಿಂದೂ ರಾಷ್ಟ್ರ ಸಂಕಲ್ಪದ ವಿಷಯ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಜಾಗೃತಿ ಮೂಡುತ್ತಿದೆ. ಆದ್ದರಿಂದ ಈ ಬಾರಿಯ ಅಧಿವೇಶನವನ್ನು ಹಿಂದಿಗಿಂತಲೂ ವಿಜೃಂಭಣೆಯಿಂದ ನಡೆಸಲಾಗುವುದು’ ಎಂದರು.

‘ಭಾರತದ 26 ರಾಜ್ಯಗಳ ಸದಸ್ಯರು, ಬಾಂಗ್ಲಾದೇಶದ 200ಕ್ಕೂ ಅಧಿಕ ಸಂಘಟನೆಗಳ 800ಕ್ಕೂ ಹೆಚ್ಚು ಹಿಂದೂ ನಿಷ್ಠರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಕಾಶ್ಮೀರಿ ಹಿಂದೂಗಳ ಪುನರ್ವಸತಿ, ಸಮಾನ ನಾಗರಿಕ ಕಾನೂನು, ಗೋ ಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ಆಯೋಧ್ಯೆಯಲ್ಲಿ ರಾಮ ಮಂದಿರದ ಪುನರ್‌ ನಿರ್ಮಾಣ ಹೀಗೆ ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಹಿಂದೂಗಳ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶ. ಇವುಗಳ ಬಗ್ಗೆ ಅಧಿವೇಶದನದಲ್ಲಿ ಚರ್ಚಿಸಲಾಗುವುದು. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲಿರುವ ಹಿಂದೂಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಯಲಿದೆ’ ಎಂದರು.

ಹಿಂದೂ ವಿಧಿಜ್ಞ ಪರಿಷತ್ತಿನ ವಕೀಲ ಮಲ್ಲೇಶಪ್ಪ ಬ್ಯಾಡಗಿ ಮಾತನಾಡಿ ‘ದೇಶಾದ್ಯಂತ ಹೆಚ್ಚುತ್ತಿರುವ ಸಾಮಾಜಿಕ ಪಿಡುಗು ತಡೆಯಲು ಮತ್ತು ಭಾರತಕ್ಕೆ ಸಾಂವಿಧಾನಿಕ ದೃಷ್ಟಿಯಿಂದ ಹಿಂದೂ ರಾಷ್ಟ್ರ ಎಂದು ಘೋಷಿಸುವಂತೆ ಒತ್ತಾಯಿಸಲು ಮೇ 27 ಮತ್ತು 28ರಂದು ಧರ್ಮಪ್ರೇಮಿ ನ್ಯಾಯವಾದಿಗಳ ಅಧಿವೇಶನ ಕೂಡ ಆಯೋಜಿಸಲಾಗಿದೆ’ ಎಂದರು.

ಸನಾತನ ಸಂಸ್ಥೆಯ ಪದಾಧಿಕಾರಿ ವಿಧುಲಾ ಹಳದೀಪುರ್ ‘ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯನಿರತರಾಗಿರುವ ವೃತ್ತಿಪರರು, ವ್ಯಾಪಾರಿಗಳ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಮೇ 28ರಂದು ಉದ್ಯಮಿಗಳ ಅಧಿವೇಶನ ಹಮ್ಮಿಕೊಂಡಿದ್ದೇವೆ’ ಎಂದರು.

ಸಾಮಾಜಿಕ ಮಾಧ್ಯಮ ಈಗ ಪ್ರಭಾವಶಾಲಿಯಾಗಿ ಬೆಳೆದಿರುವ ಕಾರಣ ಹಿಂದೂ ಕಾರ್ಯಕರ್ತರು ಮತ್ತು ವಿಚಾರವಂತರಿಗೆ ಮೊದಲ ಬಾರಿಗೆ ಜೂ. 2ರಂದು ‘ಸೋಶಿಯಲ್‌ ಮಿಡಿಯಾ ಕಾನ್‌ಕ್ಲೈವ್‌’ ನಡೆಯಲಿದೆ ಎಂದು ಅವರು ತಿಳಿಸಿದರು. ಜೂ. 5ರಿಂದ ಮೂರು ದಿನ ‘ಹಿಂದೂ ರಾಷ್ಟ್ರ–ಸಂಘಟಕ ಪ್ರಶಿಕ್ಷಣ ಮತ್ತು ಅಧಿವೇಶನ ಜರುಗಲಿದೆ.

ಬಾಂಗ್ಲಾದೇಶ ಮೈನಾರಿಟಿ ವಾಚ್‌ ಅಧ್ಯಕ್ಷ ರವೀಂದ್ರ ಘೋಷ್‌, ಹಿಂದೂ ಫ್ರಂಟ್‌ ಫಾರ್‌ ಜಸ್ಟಿಸ್‌ನ ಅಧ್ಯಕ್ಷ ಹರಿಶಂಕರ ಜೈನ್‌, ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಕೀಲ ಜಿ. ಸಾಯಿದೀಪಕ್‌, ವಿಶ್ವ ಹಿಂದೂ ಫೆಡರೇಷನ್‌ನ ಪದಾಧಿಕಾರಿ ಅಜಯ ಸಿಂಹ, ಗೃಹ ಸಚಿವಾಲಯದ ಮಾಜಿ ಹಿರಿಯ ಅಧಿಕಾರಿ ಆರ್‌.ವಿ.ಎಸ್‌. ಮಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.