ADVERTISEMENT

ಧಾರವಾಡ | ನಿರ್ವಹಣೆ ಕೊರತೆ; ಪಾಳುಬಿದ್ದ ಗಂಗೂಬಾಯಿ ಹಾನಗಲ್‌ ಜನಿಸಿದ ಮನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 4:45 IST
Last Updated 3 ಆಗಸ್ಟ್ 2023, 4:45 IST
ಧಾರವಾಡದ ಹೊಸ ಯಲ್ಲಾಪುರದಲ್ಲಿನ ಗಂಗೂಬಾಯಿ ಹಾನಗಲ್‌ ಅವರು ಜನಿಸಿದ ಮನೆಯ ಸ್ಥಿತಿ 
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ 
ಧಾರವಾಡದ ಹೊಸ ಯಲ್ಲಾಪುರದಲ್ಲಿನ ಗಂಗೂಬಾಯಿ ಹಾನಗಲ್‌ ಅವರು ಜನಿಸಿದ ಮನೆಯ ಸ್ಥಿತಿ  ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ     

ಬಿ.ಜೆ.ಧನ್ಯಪ್ರಸಾದ್‌

ಧಾರವಾಡ: ಹಿಂದೂಸ್ತಾನಿ ಗಾಯಕಿ ದಿವಂಗತ ಗಂಗೂಬಾಯಿ ಹಾನಗಲ್ (ಗಂಗಜ್ಜಿ) ಅವರು ಜನಿಸಿದ ಮನೆ, ಸಂಗೀತ ವಸ್ತುಸಂಗ್ರಹಾಲಯ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ. ಚಾವಣಿ, ಗೋಡೆಗಳು ಕುಸಿದಿವೆ.

ನಗರದ ಹೊಸ ಯಲ್ಲಾಪುರದಲ್ಲಿ (ಶುಕ್ರವಾರ ಪೇಟೆ) ಇರುವ ಈ ಮನೆಗೆ ‘ಗಂಗೋತ್ರಿ’ (ಗಾನ ಗಂಗೆಯ ಜನ್ಮಸ್ಥಳ) ಎಂದು ಹೆಸರಿದೆ. ಆದರೆ ನಾಮಫಲಕದಲ್ಲಿನ ಬಹುತೇಕ ಅಕ್ಷರಗಳು ಅಳಿಸಿವೆ.

ADVERTISEMENT

ಮನೆ ಆವರಣದಲ್ಲಿ ಅರಳಿ ಮರ, ಗಿಡಗಂಟಿ, ಬಳ್ಳಿಗಳು ಬೆಳೆದಿವೆ. ಹಾವು, ಚೇಳು, ಹುಳ–ಹುಪ್ಪಟೆಗಳು ಸೇರಿಕೊಂಡಿವೆ. ಬಾಗಿಲು, ಕಂಬಗಳು, ಪೀಠೋಪಕರಣಗಳು ಗೆದ್ದಲು ಹಿಡಿದಿವೆ. ಮನೆಯ ಗೇಟು, ಕಾಂಪೌಂಡು ಹಾಳಾಗಿವೆ. ಮುಂಬಾಗಿಲಿನ ಕದ ಮುರಿದಿರುವ ಕಡೆ ಸ್ಥಳೀಯರೇ ತಗಡಿನ ಶೀಟು ಅಳವಡಿಸಿದ್ದಾರೆ.

ಗಂಗೂಬಾಯಿ ಹಾನಗಲ್‌ ಜನಿಸಿದ ಮನೆಯ ಜಾಗದಲ್ಲಿ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನಕ್ಕೆ 2022ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಮಂಜೂರಾಗಿಲ್ಲ
ಕುಮಾರ ಬೆಕ್ಕೇರಿ, ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ

1913ರ ಮಾರ್ಚ್‌ 5ರಂದು ಜನಿಸಿದ ಗಂಗೂಬಾಯಿ ಅವರು ಸಂಗೀತ ಕಲಿಕೆ ಆರಂಭಿಸಿದ್ದು ಈ ಮನೆಯಲ್ಲೇ. ಗಂಗೂಬಾಯಿ ಮದುವೆ ಬಳಿಕ 1930ರಲ್ಲಿ ಹುಬ್ಬಳ್ಳಿಯಲ್ಲಿ ನೆಲೆಸಿದರು. 1957ರಲ್ಲಿ ಈ ಮನೆ ಮಾರಲಾಗಿತ್ತು. 1980ರವರೆಗೆ ಈ ಮನೆಯನ್ನು ವಾಸಕ್ಕೆ ಬಳಸಲಾಗಿತ್ತು. ಮಳೆಯಿಂದ 2005ರಲ್ಲಿ ಭಾಗಶಃ ಕುಸಿಯಿತು.

ಸಾಂಸ್ಕೃತಿಕ ಮಹತ್ವದ ಈ ಮನೆಯನ್ನು ರಾಜ್ಯ ಸರ್ಕಾರವು ₹25 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ಸಂಗೀತ ವಸ್ತು ಸಂಗ್ರಹಾಲಯ ಆಗಿಸಿತ್ತು. 2008ರ ಸೆಪ್ಟೆಂಬರ್ 23ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದರು. ನಂತರ ಅಲ್ಲಿ ಕೆಲ ದಿನ ಸಂಗೀತ ತರಗತಿಗಳು ನಡೆದವು. 2009ರ ಜುಲೈ 21ರಂದು ಗಂಗೂಬಾಯಿ ನಿಧನರಾದರು. ನಂತರದ ದಿನಗಳಲ್ಲಿ ಈ ಮನೆ ಪಾಳು ಬಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

‘ನಮ್ಮ ಅಜ್ಜಿ ಜನಿಸಿದ ಮನೆಯ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲು ಕೋರಿ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಸ್ಪಂದನೆ ಸಿಗಲಿಲ್ಲ. ಶತಮಾನದ ಇತಿಹಾಸವುಳ್ಳ ಪಾರಂಪರಿಕ ಮನೆ ಈಗ ಪಾಳುಬಿದ್ದಿದೆ. ಇದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಸಂರಕ್ಷಿಸಬೇಕು’ ಎಂದು ಗಂಗೂಬಾಯಿ ಅವರ ಮೊಮ್ಮಗಳು ವೈಷ್ಣವಿ ಹಾನಗಲ್‌ ತಿಳಿಸಿದರು.

ಧಾರವಾಡದ ಹೊಸ ಯಲ್ಲಾಪುರದಲ್ಲಿನ ಗಂಗೂಬಾಯಿ ಹಾನಗಲ್‌ ಅವರು ಜನಿಸಿದ ಮನೆ ಆವರಣದಲ್ಲಿ ಗಿಡಗಂಟಿ ಬೆಳೆದಿರುವುದು  ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.