ADVERTISEMENT

61 ಎಪಿಪಿಗಳ ಅಮಾನತಿಗೆ ಒತ್ತಾಯ

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 17:23 IST
Last Updated 9 ಅಕ್ಟೋಬರ್ 2018, 17:23 IST
ಎಸ್‌.ಆರ್‌.ಹಿರೇಮಠ
ಎಸ್‌.ಆರ್‌.ಹಿರೇಮಠ   

ಹುಬ್ಬಳ್ಳಿ: ‘ನೇಮಕಾತಿ ಸಂದರ್ಭದಲ್ಲಿ ಅಕ್ರಮ ಎಸಗಿದ್ದನ್ನು ಲೋಕಾಯುಕ್ತ ಸಂಸ್ಥೆ ಪತ್ತೆ ಹಚ್ಚಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ 61 ಜನ ಸಹಾಯಕ ಸರ್ಕಾರಿ ವಕೀಲರನ್ನು (ಎಪಿಪಿ) ಅಮಾನತು ಮಾಡಲು ಗೃಹ ಇಲಾಖೆ ಅನಗತ್ಯ ವಿಳಂಬ ಮಾಡುತ್ತಿದೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿವೃತ್ತ ಪ್ರಭಾರ ನಿರ್ದೇಶಕ ಚಂದ್ರಶೇಖರ ಜಿ. ಹಿರೇಮಠ ಹಾಗೂ ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರೇ ಈ ಪ್ರಕರಣದ ರೂವಾರಿಗಳು. ಪರೀಕ್ಷೆ ಬರೆದ ಬಳಿಕ ಅಭ್ಯರ್ಥಿಗಳ ಅಂಕಗಳನ್ನು ತಿದ್ದಿದ್ದಾರೆ. ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟ ಸ್ಥಳದಲ್ಲಿ ಉತ್ತರ ಬರೆಸಿ ಹೆಚ್ಚುವರಿ ಅಂಕಗಳನ್ನು ಹಾಕಿಸಿದ್ದಾರೆ. ಇದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ’ ಎಂದರು.

‘ತಪ್ಪಿತಸ್ಥ ಎಪಿಪಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಲೋಕಾಯುಕ್ತ ಸಂಸ್ಥೆ ಪತ್ರ ಬರೆದಿದ್ದರೂ ಅವರನ್ನು ಅಮಾನತು ಮಾಡಲು ಸ್ಪಷ್ಟ ನಿಯಮಗಳು ಇಲ್ಲ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಉತ್ತರ ನೀಡಿದ್ದಾರೆ. ಅಕ್ರಮ ಎಸಗಿದ್ದು ಸಾಬೀತಾದರೂ ನಿಯಮಗಳು ಇಲ್ಲ ಎಂಬ ಕಾರಣ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಇಂತಹ ಅಧಿಕಾರಿಗಳು ಬೇರೆಯವರಿಗೆ ಹುದ್ದೆ ವಹಿಸಿ ಸ್ವಯಂ ನಿವೃತ್ತಿ ಪಡೆದುಕೊಳ್ಳುವುದು ಒಳ್ಳೆಯದು’ ಎಂದು ಟೀಕಿಸಿದರು.

ADVERTISEMENT

‘ಸಹಾಯಕ ಸರ್ಕಾರಿ ವಕೀಲರು ಎಂದರೆ ಅಸಹಾಯಕ ಕಕ್ಷಿದಾರರಿಗೆ ನ್ಯಾಯ ಕೊಡಿಸುವವರು. ಇವರೇ ಅಕ್ರಮ ಮಾರ್ಗದ ಮೂಲಕ ಹುದ್ದೆ ಪಡೆದುಕೊಂಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.