ADVERTISEMENT

ಹುಬ್ಬಳ್ಳಿ: ಕಾಲಮಿತಿಯಲ್ಲಿ ಮನೆ ನಿರ್ಮಾಣ

ಗಿರಣಿಚಾಳ: ಶಾಸಕ ಜಗದೀಶ ಶೆಟ್ಟರ್‌ರಿಂದ ಸ್ಥಳ ಪರಿಶೀಲನೆ, ಭರವಸೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:45 IST
Last Updated 23 ಜೂನ್ 2022, 2:45 IST
ಹುಬ್ಬಳ್ಳಿಯ ಗಿರಣಿಚಾಳ ಕೊಳೆಗೇರಿ ಪ್ರದೇಶಕ್ಕೆ ಶಾಸಕ ಜಗದೀಶ ಶೆಟ್ಟರ್‌ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಗಿರಣಿಚಾಳ ಕೊಳೆಗೇರಿ ಪ್ರದೇಶಕ್ಕೆ ಶಾಸಕ ಜಗದೀಶ ಶೆಟ್ಟರ್‌ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮನೆ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ವಿದ್ಯುತ್‌ ಕಂಬದ ತಂತಿಗಳು ಬೀಳುವ ಹಂತದಲ್ಲಿವೆ. ಹಕ್ಕುಪತ್ರ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ... ಗಿರಣಿಚಾಳ ಕೊಳೆಗೇರಿ ಪ್ರದೇಶದ ಜನ ಹೀಗೆ ಸಮಸ್ಯೆಗಳ ಸುರಿಮಳೆಯನ್ನೇ ಶಾಸಕ ಜಗದೀಶ ಶೆಟ್ಟರ್‌ ಅವರ ಮುಂದೆ ಸುರಿಸಿದರು.

ಗಿರಣಿಚಾಳದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಕೈಗೊಂಡ ಮನೆಗಳ ನಿರ್ಮಾಣ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದ ಹಿನ್ನೆಲೆಯಲ್ಲಿ ಶಾಸಕ ಜಗದೀಶ ಶೆಟ್ಟರ್‌ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉದ್ದೇಶಿತ ಯೋಜನೆಯಡಿ ಗಿರಣಿಚಾಳ ಕೊಳೆಗೇರಿಯ ಪ್ರದೇಶದಲ್ಲಿ ಒಟ್ಟು 126 ಮನೆಗಳನ್ನು ನಿರ್ಮಿಸಿ
ಕೊಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇವುಗಳಲ್ಲಿ 76 ಜನ ಫಲಾನುಭವಿಗಳು ಡಿಮ್ಯಾಂಡ್‌ ಡ್ರಾಫ್ಟ್‌ (ಸರ್ಕಾರ ನಿಗದಿ ಮಾಡಿದ ನಿರ್ದಿಷ್ಟ ಮೊತ್ತ) ತುಂಬಿದ್ದಾರೆ. 40 ಮನೆಗಳನ್ನು ಸಹ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ. ಅರ್ಧಕ್ಕೆ ನಿಂತ ಮನೆಗಳನ್ನು ನಾವೇ ಸ್ವಂತ ಹಣ ಹಾಕಿ ನಿರ್ಮಿಸಿದ್ದೇವೆ. ಇನ್ನುಳಿದ 36 ಮನೆಗಳನ್ನು ಕಳೆದ ಎರಡು ವರ್ಷಗಳಿಂದ ನಿರ್ಮಿಸಲಾಗುತ್ತಿದ್ದು, ಉಪ ಗುತ್ತಿಗೆ ನೀಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.

ADVERTISEMENT

ಬಾಡಿಗೆ ಮನೆಗಳಲ್ಲಿ ಕಾಲ ಕಳೆಯುತ್ತಿದ್ದೇವೆ. ಹಕ್ಕುಪತ್ರ ವಿತರಿಸಲು ಇರುವ ತೊಡಕು ನಿವಾರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಜಾಗವೂ ಇಲ್ಲ, ಮನೆಯೂ ನಿರ್ಮಾಣವಾಗಿಲ್ಲ ಎನ್ನುವ ಪರಿಸ್ಥಿತಿ ಇದೆ. ಕೂಡಲೇ ಗುತ್ತಿಗೆದಾರರಿಗೆ ನಿರ್ದೇಶನ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಗದೀಶ ಶೆಟ್ಟರ್‌ ಅವರು, ‘ಗಿರಣಿಚಾಳದ‌ಲ್ಲಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಪತ್ರವನ್ನೂ ಬರೆಯಲಾಗಿದೆ. ಮೂರು ದಿನಗಳೊಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸಮೀಕ್ಷೆ ಮಾಡಿ ವರದಿ ನೀಡುವಂತೆಯೂ ಸೂಚನೆ ನೀಡಲಾಗಿದೆ. ವರದಿಯ ಆಧಾರದ ಮೇಲೆ ಮನೆಗಳ ನಿರ್ಮಾಣಕ್ಕೆ ಗಡುವು ನಿಗದಿ ಮಾಡಲಾಗುವುದು’ ಎಂದು ಹೇಳಿದರು.

‘ಒಳಚರಂಡಿ ಪೈಪ್‌ಲೈನ್‌ಗಳು ಹಳೆಯದಾಗಿದ್ದು, ಬದಲಾಯಿಸಲು ಕ್ರಮ ವಹಿಸಲಾಗುವುದು. ಹಕ್ಕುಪತ್ರ ನೀಡುವುದಕ್ಕೆ ಸ್ಥಳದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕೆಲವು ಅಡೆತಡೆಗಳಿವೆ. ಈ ವಿಷಯವನ್ನೂ ಚರ್ಚಿಸಲಾಗಿದೆ. ಎಲ್ಲವನ್ನೂ ಹಂತ ಹಂತವಾಗಿ ಪರಿಹರಿಸಲಾಗುವುದು’ ಎಂದು ವಿವರಿಸಿದರು.

ಸಬ್‌ ರಿಜಿಸ್ಟರ್‌ ನೋಂದಣಿಗೆ ಮನವಿ: ಗಿರಣಿಚಾಳ ಪ್ರದೇಶದಲ್ಲಿನ ಮನೆಗಳನ್ನು ಸಬ್‌ ರಿಜಿಸ್ಟರ್‌ ನೋಂದಣಿ ಮಾಡಿಕೊಡುವಂತೆ ಕೊಳಗೇರಿ ನಿರ್ಮೂಲನಾ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಸಮಸ್ತ ಗಿರಣಿಚಾಳ ನಿವಾಸಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು. ಬ್ಯಾಂಕ್‌ ಸಾಲ ಪಡೆಯಲು ಹಾಗೂ ಖರೀದಿ ಕಾಗದ ಪತ್ರ ಪಡೆಯಲು ನೆರವಾಗುವಂತೆ ಸಬ್‌ರಿಜಿಸ್ಟರ್‌ ನೋಂದಣಿಗೆ ಸಹಕರಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಸಮಸ್ತ ಗಿರಣಿಚಾಳ ನಿವಾಸಿಗಳ ಸಂಘದ ಅಧ್ಯಕ್ಷ ಮೋಹನ‌ ಹಿರೇಮನಿ, ಮಾರುತಿ ಬಾರಕೇರ, ಪರಶುರಾ ಪೂಜಾರ, ಗಂಗಾಧರ ಕಮಲದಿನ್ನಿ, ಗುರುನಾಥ ಗಾಂಜಾಗೋಳ, ವೀರಭದ್ರಪ್ಪ ಹಾಲಹರವಿ,ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಎಂಜಿನಿಯರ್ ಸುರೇಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.