ಹುಬ್ಬಳ್ಳಿ: 'ಮಾರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅಗತ್ಯವಿಲ್ಲ. ಇದ್ದ ಕಾನೂನುಗಳನ್ನೇ ಬಲಪಡಿಸಬೇಕು' ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದೌರ್ಜನ್ಯಕ್ಕೊಳಗಾದ ದೊಡಮನಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
'ದಲಿತರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಾಕಷ್ಟು ಕಾನೂನುಗಳಿವೆ. ಹೊಸ ಕಾಯ್ದೆ ಜಾರಿಗೆ ತಂದರೆ ನೂರರಲ್ಲಿ ಅದು ಸಹ ಒಂದಾಗಲಿದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಇದ್ದ ಕಾಯ್ದೆಯನ್ನೇ ಗಟ್ಟಿಪಡಿಸಲು ಏನು ಮಾಡಬಹುದು ಎಂದು ಸರ್ಕಾರ ಚಿಂತನೆ ನಡೆಸಬೇಕು' ಎಂದು ಹೇಳಿದರು.
'ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು' ಎಂದರು
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, 'ಗ್ರಾಮದಲ್ಲಿ ನಡೆದ ಕೃತ್ಯ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದಾಗಿದೆ. ಸಮಾಜ ಬಹಳ ಮುಂದುವರೆದಿದ್ದು, ಅದನ್ನು ಅರಿಯದವರು ಇಂತಹ ಕೃತ್ಯ ಎಸಗುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಬದುಕಿದ ನಾಡಿನಲ್ಲಿ ಇಂತಹ ಘಟನೆ ಎಂದೂ ನಡೆಯಬಾರದು' ಎಂದು ಹೇಳಿದರು.
'ರಾಜ್ಯ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ಕಾಯ್ದೆ ತರಲು ಮುಂದಾಗಿದ್ದು, ಕಾಲಹರಣದ ಕೆಲಸವಾಗಿದೆ' ಎಂದರು.
ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ವಿಜಯ ನಾಡಜೋಶಿ, ಅನೂಪ ಬಿಜವಾಡ, ಶ್ರೀಧರ ಕಂದಗಲ್, ಸುರೇಶ ಖಾನಾಪುರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.