
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಗಾಯಗೊಂಡು ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೊಡಮನಿ ಕುಟುಂಬದ ಸದಸ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ತಲೆ ಭಾಗಕ್ಕೆ ಪೆಟ್ಟು ಬಿದ್ದು ಮೂರು ದಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರವಾದ ರೇಣವ್ವ (ಮಾನ್ಯಾ ಅವರ ಅತ್ತೆ) ಅವರಿಂದ, ಘಟನೆಯ ಮಾಹಿತಿ ಪಡೆದರು.
ಸಂತೋಷ ಲಾಡ್ ಫೌಂಡೇಷನ್ ವತಿಯಿಂದ ಕುಟುಂಬಕ್ಕೆ ₹2.50 ಲಕ್ಷ ಆರ್ಥಿಕ ನೆರವು ನೀಡಿದ ಅವರು, ರಾಜ್ಯ ಸರ್ಕಾರ ಸದಾ ನಿಮ್ಮ ಕುಟುಂಬದ ಜೊತೆ ಇರಲಿದೆ ಎಂದು ಧೈರ್ಯ ತುಂಬಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸೌಲಭ್ಯ ಹಾಗೂ ಭದ್ರತೆ ಒದಗಿಸಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
‘ಪ್ರಕರಣದ ಕುರಿತು ಮಾಹಿತಿಯಿದ್ದರೂ ಸಮಾಜ ಕಲ್ಯಾಣ ಇಲಾಖೆ ಯಾಕಾಗಿ ನಿರ್ಲಕ್ಷ್ಯ ವಹಿಸಿತು ಎನ್ನುವ ಕುರಿತು ಪರಿಶೀಲನೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಯ ಸಚಿವರ ಜತೆ ಚರ್ಚಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ’ ಎಂದರು.
‘ಶಿಷ್ಟಾಚಾರ ಹಾಗೂ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಬೆಳಗಲಿ ಗ್ರಾಮದ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಪೊಲೀಸ್ ತನಿಖೆಯೂ ನಡೆಯುತ್ತಿದ್ದು, ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ಸ್ಥಾಪನೆಗೂ ಚಿಂತಿಸಲಾಗುವುದು’ ಎಂದು ಹೇಳಿದರು.
ಗ್ರಾಮಕ್ಕೆ ಭೇಟಿ: ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಲಾಡ್, ಕೃತ್ಯ ನಡೆದ ಸ್ಥಳ ಪರಿಶೀಲಿಸಿ ಪೊಲೀಸರಿಂದ ಮಾಹಿತಿ ಪಡೆದರು. ದೊಡಮನಿ ಕುಟುಂಬದವರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳ ಮಾಹಿತಿ ಪಡೆದರು. ಪೊಲೀಸರು ರಕ್ತದ ಕಲೆ, ಬಳೆಯ ಚೂರುಗಳನ್ನು ತೋರಿಸಿ ಹಲ್ಲೆಯ ಭೀಕರತೆಯನ್ನು ವಿವರಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಸಿಪಿ ಮಹಾನಿಂಗ ನಂದಗಾವಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ತಹಶೀಲ್ದಾರ್ ಜೆ.ಬಿ. ಮಜ್ಜಗಿ, ತಾ.ಪಂ. ಇಒ ರಾಮಚಂದ್ರ ಹೊಸಮನಿ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಇದ್ದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಕೆ. ಪಾಟೀಲ, ಒಳಮೀಸಲಾತಿ ಹೋರಾಟಗಾರ ಭಾಸ್ಕರಪ್ರಸಾದ, ಮುಖಂಡರಾದ ಸಂಕಲ್ಪ ಶೆಟ್ಟರ್, ಶಂಕರ ಪಾಟೀಲ ಮುನೇನಕೊಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Quote - ಗ್ರಾಮದಲ್ಲಿ ಪ್ರೀತಿ–ವಿಶ್ವಾಸ ಹಾಗೂ ಒಗ್ಗಟ್ಟು ಮೂಡಿಸಲು ಪಕ್ಷಾತೀತವಾಗಿ ಎಲ್ಲರೂ ಶ್ರಮಿಸುತ್ತೇವೆ. ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಯಾಗಬೇಕು –ಸಂತೋಷ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
Cut-off box - ಪರಿಹಾರಕ್ಕೆ ತಾಂತ್ರಿಕ ಸಮಸ್ಯೆ ಮರ್ಯಾದೆಗೇಡು ಹತ್ಯೆಯಾದ ಮಾನ್ಯಾ ಅವರ ಜಾತಿಯು ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದಿರುವ ಕಾರಣ ದಲಿತ ದೌರ್ಜನ್ಯ ಕಾಯ್ದೆಯಡಿ ಕೆಲವು ಪರಿಹಾರ ಪಡೆಯಲು ಕುಟುಂಬಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಚಿವ ಸಂತೋಷ ಲಾಡ್ ಅವರ ಸಲಹೆ ಮೇರೆಗೆ ಸಂಘಟನೆ ಮುಖಂಡರು ಕುಟುಂಬದವರೊಂದಿಗೆ ನಿಯೋಗ ಬೆಂಗಳೂರಿಗೆ ತೆರಳಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದಲಿತ ವಿಮೋಚನಾ ಸಮಿತಿಯ ಶ್ರೀಧರ ಕಂದಗಲ್ ‘ಕುಟುಂಬಕ್ಕೆ ಅಗತ್ಯವಿರುವ ಸೌಲಭ್ಯ ಹಾಗೂ ತುರ್ತು ಪರಿಹಾರವನ್ನು ಜಿಲ್ಲಾಡಳಿತ ಒದಗಿಸಿದೆ. ಕೆಲವು ಪರಿಹಾರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಸಚಿವರ ಸಲಹೆ ಮೇರೆಗೆ ನಿಯೋಗ ಕೊಂಡೊಯ್ದು ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗುವುದು’ ಎಂದರು.
Cut-off box - ‘ಗ್ರಾಮಕ್ಕೆ ಹೋಗಲು ಆತಂಕ’ ‘ಘಟನೆಯಿಂದ ತೀವ್ರ ಆಘಾತವಾಗಿದ್ದು ಪುನಃ ಗ್ರಾಮಕ್ಕೆ ಹೋಗಿ ವಾಸ ಮಾಡುವಷ್ಟು ಧೈರ್ಯ ನಮಗಿಲ್ಲ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನಾಂ ವೀರಾಪುರ ಗ್ರಾಮದ ದೊಡಮನಿ ಕುಟುಂಬದ ಸದಸ್ಯರು ಸಚಿವ ಲಾಡ್ ಅವರ ಬಳಿ ಅಳಲು ತೋಡಿಕೊಂಡರು. ‘ಸಮಯಕ್ಕೆ ಸರಿಯಾಗಿ ಪೊಲೀಸರು ಬಂದಿದ್ದರಿಂದ ಜೀವ ಉಳಿದಿದೆ. ಪ್ರಬಲ ಸಮುದಾಯದವರೇ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಾವು ಅಲ್ಲಿ ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ನಮಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.