ADVERTISEMENT

ಮೊದಲ ಬಾರಿಗೆ ಸಿನಿಮೋತ್ಸವಕ್ಕೆ ಧಾರವಾಡದಲ್ಲಿ ಆತಿಥ್ಯ: ನಟ ಸುಮನ್‌ ವಿಶ್ವಾಸ

ಜಾಗತಿಕ ಸಿನಿಮಾ ನಕ್ಷೆಯಲ್ಲಿ ಧಾರವಾಡ ಮಿಂಚು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:06 IST
Last Updated 10 ಮಾರ್ಚ್ 2021, 2:06 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಿರ್ಮಾಪಕ ಸಾ.ರಾ. ಗೋವಿಂದು ಹಾಗೂ ನಟ ಸುಮನ್‌ ಅವರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಿರ್ಮಾಪಕ ಸಾ.ರಾ. ಗೋವಿಂದು ಹಾಗೂ ನಟ ಸುಮನ್‌ ಅವರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿದರು   

ಹುಬ್ಬಳ್ಳಿ: ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅವಳಿ ನಗರಗಳ ತಲಾ ನಾಲ್ಕು ಸ್ಕ್ರೀನ್‌ಗಳಲ್ಲಿ ಮೇ 21ರಿಂದ ಮೂರು ದಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಿದೆ ಎಂದು ಚಿತ್ರೋತ್ಸವದ ಉಸ್ತುವಾರಿ ಅಲ್ತಾಫ್‌ ಜಹಾಂಗೀರ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ‘ಹುಬ್ಬಳ್ಳಿಯಲ್ಲಿ ನಾಲ್ಕು ಸ್ಕ್ರೀನ್‌, ಧಾರವಾಡದಲ್ಲಿ ಸೃಜನಾ ಕಲಾಮಂದಿರ, ಕಲಾಭವನ, ನೌಕರರ ಭವನ ಮತ್ತು ರಂಗಾಯಣದಲ್ಲಿ ಸಿನಿಮಾಗಳು ಪ್ರದರ್ಶನವಾಗಲಿವೆ. ಭಾರತ, ಮಾಲ್ಡೀವ್ಸ್‌ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳ ಸಿನಿಮಾಗಳು ಇರಲಿವೆ’ ಎಂದರು.

‘14ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರಲಿದ್ದು, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12ರ ತನಕ ಐದು ಪ್ರದರ್ಶನಗಳಿರಲಿವೆ. ಮೇ 21ರಂದು ಬೆಳಿಗ್ಗೆ 9 ಗಂಟೆಗೆ ನವೀನ್‌ ಹೋಟೆಲ್‌ನಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. 300 ಜನ ಅಂತರರಾಷ್ಟ್ರೀಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳ ಸಿನಿಮಾ ಪ್ರದರ್ಶಿಸಲಾಗುವುದು. ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಚಲನಚಿತ್ರೋತ್ಸವಕ್ಕೆ ಇದು ಪರ್ಯಾಯವಲ್ಲ. ಈ ಭಾಗವನ್ನು ಸಿನಿಮಾ ಹಬ್‌ ಮಾಡುವ ಉದ್ದೇಶದಿಂದ ಮೊದಲ ಬಾರಿಗೆ ಚಿತ್ರೋತ್ಸವ ಮಾಡಲಾಗುತ್ತಿದೆ’ ಎಂದು ಹೇಳಿದರು.

ನಟ ಸುಮನ್‌ ತ‌ಲ್ವಾರ್ ಮಾತನಾಡಿ ‘ಹುಬ್ಬಳ್ಳಿ–ಧಾರವಾಡದಲ್ಲಿ ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜನೆ ವಿಷಯ ತಿಳಿದು ಅಚ್ಚರಿಯಾಯಿತು; ಅಷ್ಟೇ ಖುಷಿಯೂ ಆಯಿತು. ಈ ಸಿನಿಮೋತ್ಸವ ಯಶಸ್ಸು ಕಂಡರೆ ಅಂತರರಾಷ್ಟ್ರೀಯ ಸಿನಿಮಾ ನಕ್ಷೆಯಲ್ಲಿ ಧಾರವಾಡ ಜಿಲ್ಲೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ. ಇದರಿಂದ ಈ ಭಾಗದಲ್ಲಿ ಸಿನಿಮಾ ರಂಗ, ಕಲಾವಿದರು ಕೂಡ ಬೆಳೆಯುತ್ತಾರೆ’ ಎಂದರು.

ಭಾರತ ಸಿನಿಮಾ ಫೆಡರೇಷನ್‌ ಉಪಾಧ್ಯಕ್ಷ ಎನ್‌.ಎಂ. ಸುರೇಶ ಮಾತನಾಡಿ ‘ಕರ್ನಾಟಕದಲ್ಲಿ ವಿವಿಧ ಭಾಷೆಗಳ ಚಿತ್ರಗಳ ಬಿಡುಗಡೆಗೆ ಸುಲಭವಾಗಿ ಅವಕಾಶ ಕೊಟ್ಟು ಸಹೃದಯತೆ ತೋರಿಸಿದ್ದೇವೆ. ಆದರೆ, ಬೇರೆ ಕಡೆ ಹೋದಾಗ ಕನ್ನಡ ಸಿನಿಮಾಗಳಿಗೆ ಇಂಥ ಗೌರವ ಸಿಗುವುದಿಲ್ಲ. ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಬೇರೆ ಯಾವುದೇ ಸಂಸ್ಥೆ ಆರಂಭಿಸಬಾರದು. ಮಾತೃ ಸಂಸ್ಥೆ ಅಧೀನದಲ್ಲಿ ಜೊತೆಗೂಡಿ ಹೋದರೆ ಕನ್ನಡ ಚಿತ್ರೋದ್ಯಮ ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.

ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಂ.ಆರ್‌. ಮಮ್ಮಿಗಟ್ಟಿ, ನವದೆಹಲಿ ಇಂಡೊ ಲ್ಯಾಟಿನ್‌ ಅಮೆರಿಕ ವಾಣಿಜ್ಯ ಮಂಡಳಿ ವಿ.ಪಿ.ವಿ.ವೈ. ಮೂರ್ತಿ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ಇದ್ದರು.

21ರಿಂದ ನೋಂದಣಿ, ₹1,100 ಬೆಲೆ

ಚಲನಚಿತ್ರೋತ್ಸವದಲ್ಲಿ ಸಿನಿಮಾಗಳನ್ನು ನೋಡಲು ಮೂರು ದಿನ ಸೇರಿ ₹1,100 ನಿಗದಿ ಮಾಡಲಾಗಿದೆ. 60 ಕಿರುಚಿತ್ರಗಳು ಪ್ರದರ್ಶಿತವಾಗಲಿದ್ದು, ಉತ್ತಮ ಕಿರುಚಿತ್ರಕ್ಕೆ ಬಹುಮಾನ ನೀಡಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ‘ಗೋಲ್ಡನ್‌ ಬಟರ್‌ಫ್ಲೈ’ ಪ್ರಶಸ್ತಿ ನೀಡಲಾಗುವುದು ಎಂದು ಚಿತ್ರೋತ್ಸವದ ಉಸ್ತುವಾರಿ ಅಲ್ತಾಫ್‌ ಜಹಾಂಗೀರ್‌ ತಿಳಿಸಿದರು. ಇದೇ 21ರಿಂದ ಆನ್‌ಲೈನ್‌ ಮೂಲಕ ನೋಂದಣಿ ಆರಂಭವಾಗಲಿದೆ. http://kiff.plaincypher.com/committee-2/ ಮೂಲಕ ಹೆಸರು ನೋಂದಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.