ಹುಬ್ಬಳ್ಳಿ: ‘ಯುವಜನರು ಸೇರಿದಂತೆ ಎಲ್ಲ ಆರೋಗ್ಯವಂತರು ರಕ್ತದಾನ ಮಾಡಬೇಕು’ ಎಂದು ಪ್ರಾಚಾರ್ಯೆ ಸುಮಂಗಲಾ ಬಿ.ಪಾಟೀಲ ಹೇಳಿದರು.
ಕೆ.ಎಲ್.ಇ. ಅಧ್ಯಕ್ಷ ಪ್ರಭಾಕರ ಕೋರೆ ಜನ್ಮದಿನದ ಅಂಗವಾಗಿ ಇಲ್ಲಿನ ಕಾಡಸಿದ್ಧೇಶ್ವರ ಕಲಾ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಎನ್.ಎಸ್.ಎಸ್. ಘಟಕ, ಎನ್.ಸಿ.ಸಿ. ಘಟಕ, ಯುವ ರೆಡ್‍ಕ್ರಾಸ್ ಘಟಕ ಹಾಗೂ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯ ರಕ್ತಭಂಡಾರದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಅಪಘಾತದ ಸಂದರ್ಭದಲ್ಲಿ ರಕ್ತಸ್ರಾವ ಹಾಗೂ ರಕ್ತಹೀನತೆ, ತಲೆಸೇಮಿಯಾ ಮೊದಲಾದ ರೋಗಗಳಿಂದ ಬಳಲುತ್ತಿರುವವರಿಗೆ ರಕ್ತ ಅಗತ್ಯವಿರುತ್ತದೆ. ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತ ಅವರಿಗೆ ಜೀವರಕ್ಷಕವಾಗಿದೆ’ ಎಂದು ತಿಳಿಸಿದರು.
ಕಾಲೇಜು ಒಕ್ಕೂಟದ ಅಧ್ಯಕ್ಷ ಎಸ್.ಎನ್.ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನ ಶಿಬಿರದ ಉದ್ದೇಶ ಮತ್ತು ಮಹತ್ವ ಕುರಿತು ವಿವರಿಸಿದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರಕ್ತದಾನ ಮಾಡಿದರು. 40 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ರಕ್ತ ಭಂಡಾರದ ಮುಖ್ಯಸ್ಥ ಡಾ.ಎಸ್.ವಿ.ವಿರ್ಗಿ, ವೈದ್ಯಕೀಯ ಅಧಿಕಾರಿಗಳಾದ ವಿಠಲ ಮಾನೆ, ಎಸ್.ಬಿ.ಆನಂದ, ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆ.ರಮೇಶ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಸುನೀತಾ ಪಾಟೀಲ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ವಿ.ಎಂ.ಖಾನಗೌಡರ, ಐ.ಕ್ಯು.ಎ.ಸಿ ಸಂಯೋಜಕ ಎಂ.ಬಿ.ಸಿದ್ಧೇಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.