ADVERTISEMENT

ಸವಾಲಾದ ಸರ್ಕಾರಿ ಬಸ್ ಸವಾರಿ: ಬಾಗಿಲುಗಳಲ್ಲಿ ನೇತಾಡಿಕೊಂಡು ಸಂಚರಿಸುವ ಪ್ರಯಾಣಿಕರು

ಗಣೇಶ ವೈದ್ಯ
Published 13 ಡಿಸೆಂಬರ್ 2025, 5:30 IST
Last Updated 13 ಡಿಸೆಂಬರ್ 2025, 5:30 IST
ಹುಬ್ಬಳ್ಳಿಯಲ್ಲಿ ಸೋಮವಾರ ಬಸ್ ಹತ್ತಲು ಹರಸಾಹಸ ಪ‍ಟ್ಟ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯಲ್ಲಿ ಸೋಮವಾರ ಬಸ್ ಹತ್ತಲು ಹರಸಾಹಸ ಪ‍ಟ್ಟ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದಲ್ಲಿ ಪ್ರಯಾಣಿಕರ ಓಡಾಟ ಗರಿಷ್ಠವಾಗಿರುವ ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಬಸ್‌ಗಳ ಸಂಖ್ಯೆ ಇಲ್ಲದಿರುವುದು ಸಮಸ್ಯೆ ಉಂಟುಮಾಡಿದೆ.

ಬಸ್‌ಗಳ ಒಳಗೆ ಸ್ಥಳಾವಕಾಶ ಇಲ್ಲದ ಕಾರಣ ಪ್ರಯಾಣಿಕರು ಫುಟ್‌ಬೋರ್ಡ್‌ಗಳಲ್ಲಿ ನೇತಾಡಿಕೊಂಡೇ ಪ್ರಯಾಣಿಸುವುದು ಅನಿವಾರ್ಯವಷ್ಟೇ ಅಲ್ಲ, ಅಪಾಯವನ್ನೂ ತಂದೊಡ್ಡುತ್ತದೆ.

ಹುಬ್ಬಳ್ಳಿ– ಧಾರವಾಡ ಶೈಕ್ಷಣಿಕ ಕೇಂದ್ರವಾದ ಕಾರಣ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಉದ್ಯೋಗಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವವರ ಸಂಖ್ಯೆಯೂ ದೊಡ್ಡದೇ ಇದೆ. ಹೀಗಾಗಿ ಶಾಲೆ– ಕಾಲೇಜುಗಳು, ಕಚೇರಿಗಳು ಆರಂಭವಾಗುವ ಮತ್ತು ಬಿಡುವ ಸಮಯದಲ್ಲಿ ದಟ್ಟಣೆ ಅಧಿಕ. ಜೊತೆಗೆ, ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ‘ಶಕ್ತಿ’ ಯೋಜನೆಯನ್ನೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ADVERTISEMENT

4 ಲಕ್ಷಕ್ಕೂ ಅಧಿಕ ಪ್ರಯಾಣಿಕರು: ಅವಳಿ ನಗರಗಳಲ್ಲಿ ಚಿಗರಿ ಸೇರಿ ಒಟ್ಟು 443 ಸರ್ಕಾರಿ ಬಸ್‌ಗಳು ನಿತ್ಯ 7,454 ಟ್ರಿಪ್‌ಗಳು ಓಡಾಡುತ್ತಿವೆ ಎಂಬುದು ಅಧಿಕಾರಿಗಳು ನೀಡುವ ಮಾಹಿತಿ. ಇವುಗಳಲ್ಲಿ ಕೆಲವು ದುರಸ್ತಿಗೆಂದು ಡಿಪೊದಲ್ಲೇ ಉಳಿದರೆ ಮತ್ತೆ ಕೆಲವು ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯ. ಆದರೆ ಇಷ್ಟು ಬಸ್‌ಗಳಲ್ಲಿ ನಿತ್ಯ 4 ಲಕ್ಷಕ್ಕೂ ಅಧಿಕ ಜನರು ಓಡಾಡುತ್ತಾರೆ. ಭಾನುವಾರ (ಡಿ.7) ಒಂದೇ ದಿನ 4.26 ಲಕ್ಷ ಜನರು ಓಡಾಡಿದ್ದಾರೆ. ಇದು ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ.

‘ಕಾಲೇಜಿಗೆ ತೆರಳುವ ಸಮಯಕ್ಕೆ ಸರಿಯಾಗಿ ಬಸ್‌ಗಳಲ್ಲಿ ಹೆಚ್ಚು ದಟ್ಟಣೆ ಇರುತ್ತದೆ. ನಾವು ಹತ್ತುವ ಜಾಗಕ್ಕೆ ಬರುವ ಮೊದಲೇ ಜನರು ನೇತಾಡುತ್ತಿರುತ್ತಾರೆ. ಕೆಲವೊಮ್ಮೆ ಚಾಲಕರು ನಿಲ್ಲಿಸದೇ ಹೋಗಿಬಿಡುತ್ತಾರೆ. ಹೀಗಾಗಿ ಸರಿಯಾದ ಸಮಯಕ್ಕೆ ಕಾಲೇಜು ತಲುಪುವುದೇ ಸಾಹಸವಾಗಿದೆ’ ಎಂದು ಅಳಲು ತೋಡಿಕೊಂಡರು ನವನಗರದಿಂದ ಹುಬ್ಬಳ್ಳಿಯ ಖಾಸಗಿ ಕಾಲೇಜೊಂದಕ್ಕೆ ಬರುವ ವಿದ್ಯಾರ್ಥಿನಿ ವಿನಯಾ ಅಳಗುಂಡಿ.

‘ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗದೇ ಇದ್ದರೆ ಮೇಲಿನವರು ಬೈಯುತ್ತಾರೆ. ಸಂಬಳ ಕಡಿತಗೊಳಿಸುವ ಬೆದರಿಕೆಯನ್ನೂ ಹಾಕುತ್ತಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವುದು ತಡವಾದರೆ, ಸಂಜೆ ಮನೆಗೆ ಬರುವುದು ತಡವಾಗಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ. ಬರುವ ಸಂಬಳ ಜೀವನ ಸಾಗಿಸುವುದೇ ಕಷ್ಟ, ಅಂಥದ್ದರಲ್ಲಿ ನಿತ್ಯ ಆಟೊ ಮಾಡಿಕೊಂಡು ಅಥವಾ ಸ್ವಂತ ವಾಹನ ಖರೀದಿಸಿ ಓಡಾಡುವ ಶಕ್ತಿ ನಮಗಿಲ್ಲ. ಆದ್ದರಿಂದ ತಳ್ಳಾಡಿಕೊಂಡಾದರೂ ಬಸ್‌ನಲ್ಲೇ ಹೋಗಿ ಬರುವುದು ಅಭ್ಯಾಸವಾಗಿದೆ’ ಎಂದು ಸಮಸ್ಯೆಯ ತೀವ್ರತೆಯನ್ನು ತೆರೆದಿಟ್ಟರು ಶಿರೂರು ಪಾರ್ಕ್‌ನಿಂದ ದುರ್ಗದಬೈಲ್ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುವ ಬಸಮ್ಮ ಶಿವನಗುತ್ತಿ.

‘ಶಕ್ತಿ ಯೋಜನೆ ಆರಂಭವಾಗುವ ಮುನ್ನ ಇಷ್ಟೊಂದು ದಟ್ಟಣೆ ಇರಲಿಲ್ಲ. ಈಗ ಕೆಲವು ಕಡೆ ಪ್ರಯಾಣಿಕರು ಕೈ ತೋರಿದರೂ ನಿಲುಗಡೆ ಮಾಡಲು ಸಾಧ್ಯವಾಗದಷ್ಟು ದಟ್ಟಣೆ ಉಂಟಾಗುತ್ತಿದೆ. ಪ್ರಯಾಣಿಕರು ನಮಗೆ ನಿತ್ಯ ಶಾಪ ಹಾಕುತ್ತಾರೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಬಸ್ ನಿರ್ವಾಹಕರೊಬ್ಬರು.

ದಿನದ ಬೇರೆ ಸಂದರ್ಭಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇದ್ದರೂ ಕಚೇರಿ, ಶಾಲೆ ಕಾಲೇಜು ಸಮಯಕ್ಕಾದರೂ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಎಂಬುದು ಪ್ರಯಾಣಿಕರ ಆಗ್ರಹ.

‘ರಸ್ತೆ ಕಾಮಗಾರಿ; ಟ್ರಿಪ್ ಅಪೂರ್ಣ’

‘ರಸ್ತೆ ಕಾಮಗಾರಿ ಕಾರಣಕ್ಕೆ ಬಸ್‌ಗಳು ನಿರ್ದಿಷ್ಟ ನಿಲ್ದಾಣಗಳನ್ನು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಒಂದು ಬಸ್‌ಗೆ ಹತ್ತು ಟ್ರಿಪ್ ನಿಗದಿ ಮಾಡಿದ್ದರೆ ಅದು ಎಂಟು ಬಾರಿ ಮಾತ್ರ ಓಡಾಡಲು ಸಾಧ್ಯವಾಗುತ್ತಿದೆ. ಹತ್ತು ಬಸ್‌ಗಳಲ್ಲಿ ಓಡಾಡಬೇಕಿದ್ದ ಜನರು ಎಂಟೇ ಬಸ್‌ಗಳಲ್ಲಿ ಸಂಚರಿಸುವಂತಾಗಿ ದಟ್ಟಣೆ ಉಂಟಾಗುತ್ತಿದೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಹುಬ್ಬಳ್ಳಿ– ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಸಿದ್ದಲಿಂಗೇಶ ಮಾಹಿತಿ ನೀಡಿದರು. ‘ಪ್ರಯಾಣಿಕರ ಸುರಕ್ಷತೆಯನ್ನೂ ನಾವು ನಿರ್ಲಕ್ಷಿಸಿಲ್ಲ. ಬಸ್‌ಗಳಲ್ಲಿ ದಟ್ಟಣೆ ಉಂಟಾಗಿ ಅವಘಡಗಳು ಸಂಭವಿಸಿದ ಪ್ರಕರಣಗಳು ವರದಿಯಾಗಿಲ್ಲ. ಹೊಸ ಬಸ್‌ಗಳಲ್ಲಿ ಸ್ವಯಂ ಚಾಲಿತವಾಗಿ ಬಾಗಿಲುಗಳು ಮುಚ್ಚುವ– ತೆರೆದುಕೊಳ್ಳುವ ವ್ಯವಸ್ಥೆ ಇದೆ. ಹಳೆಯ ಬಸ್‌ಗಳಲ್ಲಿ ಮಾತ್ರ ಈ ವ್ಯವಸ್ಥೆ ಇಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.