ಹುಬ್ಬಳ್ಳಿಯ ಬಸವವನದ ಬಳಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡಲು ನಾಲ್ಕು ತಿಂಗಳು ಬಂದ್ ಆಗಿದ್ದ ಹಳೇ (ಕೇಂದ್ರೀಯ) ಬಸ್ ನಿಲ್ದಾಣ, ಗಣೇಶ ಹಬ್ಬದ ವೇಳೆ ಕಾರ್ಯಾಚರಣೆ ಆರಂಭಿಸಲಿದೆ.
ಬಸವ ವನದಿಂದ ಹಳೇ ಕೋರ್ಟ್ ವೃತ್ತದವರೆಗಿನ 650 ಮೀಟರ್ ರಸ್ತೆಯನ್ನು ಏಪ್ರಿಲ್ 20ರಿಂದ ಬಂದ್ ಮಾಡಲಾಗಿದೆ. ಹಳೇ ಬಸ್ ನಿಲ್ದಾಣವನ್ನು ಸಹ ಬಂದ್ ಮಾಡಿ, ಬಸ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 19ರವರೆಗೆ ನಿಗದಿಪಡಿಸಿದ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಮಳೆಯಿಂದಾಗಿ ಕಾಮಗಾರಿ ತುಸು ವಿಳಂಬವಾದ ಕಾರಣ, ಹೆಚ್ಚುವರಿಯಾಗಿ ಹತ್ತು ದಿನ ನೀಡಲಾಗಿದೆ.
ನಿಗದಿ ಪಡಿಸಿದ ಪ್ರಮುಖ ಕೆಲಸಗಳು ಬಹುತೇಕ ಮುಕ್ತಾಯವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಣೇಶ ಹಬ್ಬದ ವೇಳೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ.
‘ಅಪಾಯಕಾರಿ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಹದಿನೈದು ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಚನ್ನಮ್ಮ ವೃತ್ತದ ಕೋರ್ಟ್ ರಸ್ತೆ ಬಳಿ ಆರು ಗರ್ಡರ್ ಅಳವಡಿಕೆ ಬಾಕಿಯಿದೆ. ಅಲ್ಲಿ ಪಿಲ್ಲರ್ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರೀಟ್ ಗಟ್ಟಿಯಾಗಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತವೆ. 80 ಟನ್ ಭಾರವಿರುವ ಗರ್ಡರ್ ಏರಿಸಬೇಕೆಂದರೆ, ಕಾಂಕ್ರಿಟ್ ಗಟ್ಟಿಯಾಗಬೇಕು. ಹಬ್ಬದ ಒಳಗೆ ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸತೀಶ ನಾಗನೂರು ತಿಳಿಸಿದರು.
‘ಹೆಚ್ಚುವರಿ ಕಾರ್ಮಿಕರು ರಾತ್ರಿ ವೇಳೆಯೂ ಕೆಲಸ ಮಾಡುತ್ತಿದ್ದಾರೆ. ಬಸವವನ, ಹಳೇ ಬಸ್‌ನಿಲ್ದಾಣ, ಚನ್ನಮ್ಮ ವೃತ್ತ ಹಾಗೂ ಕೋರ್ಟ್ ರಸ್ತೆ ಮಾರ್ಗದಲ್ಲಿರುವ ಸಾಮಗ್ರಿಗಳನ್ನು ತೆರವು ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಮುಂದಿನ ವಾರದಿಂದಲೇ ಸಾಮಗ್ರಿಗಳ ತೆರವು ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.
ಹೆಚ್ಚುವರಿ ಪಿಲ್ಲರ್ ನಿರ್ಮಾಣ: ‘ಕೋರ್ಟ್ ರಸ್ತೆಯಲ್ಲಿ ಹೆಚ್ಚುವರಿ ಪಿಲ್ಲರ್ ನಿರ್ಮಾಣವಾಗಿದ್ದರಿಂದ, ಎರಡು ಫಿಲ್ಲರ್‌ಗಳ ನಡುವೆ ಅಂತರ ಕಡಿಮೆಯಾಗಿದೆ. ಇದರಿಂದ ಗರ್ಡರ್ ಅಳತೆ ಸಹ ಚಿಕ್ಕದಾಗಿದೆ. ಹೆಚ್ಚುವರಿ ಕಾಮಗಾರಿ ಹಾಗೂ ಮಳೆಯಿಂದಾಗಿ ಗಡುವಿಗಿಂತ ಹೆಚ್ಚಿನ ಸಮಯ ನೀಡಲಾಗಿದೆ. ತಿಂಗಳಾಂತ್ಯದಲ್ಲಿ ರಸ್ತೆಯನ್ನು ಮುಕ್ತಗೊಳಿಸಲಾಗುವುದು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಈ ತಿಂಗಳಾಂತ್ಯದಲ್ಲಿ ಬಂದ್ ಮಾಡಿರುವ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಹಳೇ ಬಸ್ ನಿಲ್ದಾಣ ಕಾರ್ಯಾಚರಣೆ ಪುನರಾರಂಭಿಸಲಾಗುವುದು. ಮುಂದಿನವಾರ ಕಾಮಗಾರಿ ಪ್ರಗತಿ ಪರಿಶೀಲಿಸುತ್ತೇನೆದಿವ್ಯಪ್ರಭು ಜಿಲ್ಲಾಧಿಕಾರಿ
ಹಬ್ಬದ ನಂತರ ಠಾಣೆ ಸ್ಥಳಾಂತರ:
ಮೇಲ್ಸೇತುವೆ ಕಾಮಗಾರಿಗೆ ಭೂಸ್ವಾಧೀನವಾಗಲಿರುವ ಉಪನಗರ ಠಾಣೆಯ ಕಟ್ಟಡವನ್ನು ಜುಲೈ 31ರ ಒಳಗೆ ಸ್ಥಳಾಂತರಿಸಬೇಕು ಎಂದು ಲೋಕೋಪಯೋಗಿ ಇಲಾಖೆಯು ಪೊಲೀಸ್ ಇಲಾಖೆಗೆ ಪತ್ರದಲ್ಲಿ ಸೂಚಿಸಿತ್ತು. ಆದರೆ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಗಣೇಶ ಹಬ್ಬದ ಬಳಿಕ ಐಟಿ ಪಾರ್ಕ್‌ಗೆ ಸ್ಥಳಾಂತರವಾಗಲು ನಿರ್ಧರಿಸಿದೆ. ಸದ್ಯದಲ್ಲಿಯೇ ಗಣೇಶ ಹಬ್ಬ ಇರುವುದರಿಂದ ತುರ್ತು ಸಂದರ್ಭದಲ್ಲಿ ಸಮಸ್ಯೆಯಾಗಬಾರದು ಎಂದು ಹಬ್ಬದ ನಂತರ ಸ್ಥಳಾಂತರಗೊಳ್ಳಲು ನಿರ್ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪನಗರ ಹಾಗೂ ಮಹಿಳಾ ಪೊಲೀಸ್ ಠಾಣೆ ಸಂಚಾರ ನಿಯಂತ್ರಣ ಕೊಠಡಿ ಎಸಿಪಿ ಡಿಸಿಪಿ ಕಮಿಷನರ್ ಕಚೇರಿ ಸಹ ಅಲ್ಲಿಯೇ ಸ್ಥಳಾಂತರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.