ಹುಬ್ಬಳ್ಳಿಯ ಶಾಂತಿನಿಕೇತನ ಕಾಲೊನಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಿರುವುದು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪ್ರದೇಶದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆ ಎಂದು ಭಾವಿಸುವವರೇ ಹೆಚ್ಚು. ಆದರೆ, ವೀರಾಪೂರ ಓಣಿಯ ಮುಖ್ಯ ರಸ್ತೆಯಲ್ಲಿನ ವಾರ್ಡ್ ಸಂಖ್ಯೆ 69ರ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಜನರಿಗೆ ಅವಶ್ಯವಿರುವ ಮೂಲಸೌಲಭ್ಯ ಕಲ್ಪಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪ ಮೇಯರ್ ಬಿಜವಾಡ ದುರ್ಗಮ್ಮ ಶಶಿಕಾಂತ ಅವರು ಪ್ರತಿನಿಧಿಸುವ ಈ ವಾರ್ಡ್‌ನ ಪ್ರತಿ ಓಣಿಯಲ್ಲೂ ಸಿಮೆಂಟ್ ರಸ್ತೆ, ಒಳಚರಂಡಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿ ಪ್ರಮುಖ ಪ್ರದೇಶಗಳ ಮುಖ್ಯದ್ವಾರದಲ್ಲಿ ಸ್ವಾಗತ ಕಮಾನುಗಳ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.
ಶಾಂತಿನಿಕೇತನ ಕಾಲೊನಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹2 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ಆಗಿದೆ. ವೀರಾಪೂರ ಓಣಿಯಲ್ಲಿ ₹ 1ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಮೆಹಬೂಬ್ ನಗರದ 1ರಿಂದ 6ನೇ ಕ್ರಾಸ್ ತನಕ ಪ್ರಸ್ತುತ ₹37 ಲಕ್ಷ ವೆಚ್ಚದಲ್ಲಿ ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೆ.ಬಿ.ನಗರದಲ್ಲಿನ ಸಮುದಾಯ ಭವನದ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದ್ದು, ₹80 ಲಕ್ಷ ವೆಚ್ಚದಲ್ಲಿ ಭವನದ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ.
ಬಹುತೇಕ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳಲ್ಲಿ ₹50 ಲಕ್ಷ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದರೂ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಹೋಗುತ್ತದೆ.
ಶಾಂತಿನಿಕೇತನ ಕಾಲೊನಿ, ವೀರಾಪೂರ ಓಣಿ, ಕರ್ಕಿ ಬಸವೇಶ್ವರ ನಗರ (ಕೆಬಿ ನಗರ) ಹಾಗೂ ಗೊಲ್ಲರ ಕಾಲೊನಿಯಲ್ಲಿ ಒಟ್ಟು ₹60 ಲಕ್ಷ ವೆಚ್ಚದಲ್ಲಿ ನಾಲ್ಕು ಸ್ವಾಗತ ಕಮಾನು ನಿರ್ಮಿಸಲಾಗಿದೆ. ವೀರಾಪೂರ ಓಣಿಯ ಕರಿಯಮ್ಮನ ದೇವರ ಗುಡಿಯ ಪ್ರದೇಶಗಳಲ್ಲಿ ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಯ ಕಾಮಗಾರಿಯನ್ನೂ ಮಾಡಲಾಗಿದೆ.
ಹುಬ್ಬಳ್ಳಿಯ ಶಾಂತಿನಿಕೇತನ ಕಾಲೊನಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ವಿದ್ಯುತ್ ಕಂಬಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವುದು
ಆದರೆ, ಮೆಹಬೂಬ್ ನಗರ ಹಾಗೂ ಯಲ್ಲಾಪೂರ ಓಣಿಯಲ್ಲಿ ರಸ್ತೆ, ಒಳಚರಂಡಿ ನಿರ್ಮಾಣ ಕಾರ್ಯ ಆಗಬೇಕಿದೆ. ಕೆಲವೆಡೆ ಬೀದಿ ಬದಿಯ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ಬಲ್ಬು ಹಾಳಾಗಿವೆ. ಇದರ ಬಗ್ಗೆ ಉಪಮೇಯರ್ ಮತ್ತು ಅಧಿಕಾರಿಗಳು ಗಮನ ಹರಿಸಬೇಕು ಎಂದು ನಿವಾಸಿಗಳು ಕೋರುತ್ತಾರೆ.
ಮಹಿಳೆ ಮಕ್ಕಳ ಸುರಕ್ಷತೆ ಹಾಗೂ ಕಳವು ಪ್ರಕರಣಗಳ ನಿಯಂತ್ರಣಕ್ಕೆ ವಿದ್ಯುತ್ ಕಂಬಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಉಪಯುಕ್ತವಾಗಿದೆ.ಸುರೇಖಾ ಮಾರುತಿ ಜಾದವ್ ಗೃಹಿಣಿ ವೀರಾಪೂರ ಓಣಿ.
ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ವಿಶಾಲವಾಗಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಒಳಚರಂಡಿ ವ್ಯವಸ್ಥೆ ಆಗಬೇಕಿದೆ.ಅಣ್ಣಪ್ಪ ಬಳ್ಳಾರಿ ವೀರಾಪೂರ ಓಣಿ ನಿವಾಸಿ.
₹10 ಕೋಟಿ ವೆಚ್ಚದಲ್ಲಿ ವಾರ್ಡ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ₹2.75 ಕೋಟಿ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಇನ್ನಷ್ಟು ಅನುದಾನ ಬೇಕಿದೆ.ಬಿಜವಾಡ ದುರ್ಗಮ್ಮ ಶಶಿಕಾಂತ ಉಪಮೇಯರ್ ಸದಸ್ಯೆ 69ನೇ ವಾರ್ಡ್ ಹು–ಧಾ ಮಹಾನಗರ ಪಾಲಿಕೆ
‘ವಾರ್ಡ್ ವ್ಯಾಪ್ತಿಯಲ್ಲಿನ ವಿದ್ಯುತ್ ಕುಡಿಯುವ ನೀರು ರಸ್ತೆ ಒಳಚರಂಡಿ ಸ್ವಚ್ಛತೆ ಸೇರಿ ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ನಿವಾಸಿಗಳು ನಮ್ಮನ್ನು ಸಂಪರ್ಕಿಸಲು ಅನುಕೂಲವಾಗಲಿ ಎಂದು ಪ್ರತಿ ವಿಷಯಗಳಿಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಜನರು ಗ್ರೂಪ್‌ನಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಸದಸ್ಯೆ ಬಿಜವಾಡ ದುರ್ಗಮ್ಮ ಶಶಿಕಾಂತ ತಿಳಿಸಿದರು.
ವಾರ್ಡ್ ಸದಸ್ಯೆ: ಬಿಜವಾಡ ದುರ್ಗಮ್ಮ ಶಶಿಕಾಂತ
ವಿಸ್ತೀರ್ಣ: 0.40 ಚದುರ ಕಿಮೀ.
ಪಾಲಿಕೆ ಆಸ್ತಿಗಳ ವಿವರ: 1770
ವಾರ್ಡ್‌ನಲ್ಲಿರುವ ಒಟ್ಟು ಜನಸಂಖ್ಯೆ:12851
ವಿದ್ಯುತ್ ಕಂಬಗಳು: 298
ಬೀದಿ ದೀಪಗಳು: 385
ಸರ್ಕಾರಿ ಶಾಲೆಗಳು: 5.
ಉರ್ದು ಶಾಲೆ– 2
ಅಂಗನವಾಡಿ ಕೇಂದ್ರಗಳು: 08
ದೇವಸ್ಥಾನ ದರ್ಗಾ: ಬಳ್ಳಾರಿ ದುರ್ಗಮ್ಮ ದೇವಸ್ಥಾನ ಕರಿಯಮ್ಮ ದೇವಸ್ಥಾನ, ಮಹಾಬಲೇಶ್ವರ ದೇವಸ್ಥಾನ, ಹನುಮಾನ ದೇವರ ಗುಡಿ. ಯಲ್ಲಾಪೂರ ಓಣಿ ಹಾಗೂ ಸೆಟ್ಲಮೆಂಟ್ ಏರಿಯಾದಲ್ಲಿ ತಲಾ ಒಂದು ದರ್ಗಾ.
ವೀರಾಪೂರ ಓಣಿ -ಮುಖ್ಯರಸ್ತೆಯ ಪೂರ್ವಭಾಗ ವೀರಾಪೂರ ಓಣಿಯ ಚೌಕಿಮಠ ರಸ್ತೆ ಗೊಲ್ಲರ ಓಣಿ ಶಾಂತಿನಿಕೇತನ ಕಾಲೊನಿಯ ಸೆಟ್ಲಮೆಂಟ್ ಪ್ರದೇಶ
ಗಂಗಾಧರ ಓಣಿ ಕರ್ಕಿ ಬಸವೇಶ್ವರ ನಗರ (ಕೆಬಿ ಕಾಲೊನಿ) ಕರಿಗಣ್ಣನವರ ಹಕ್ಲಾ ಹಾಗೂ ಮೆಹಬೂಬ್ ನಗರ (1ರಿಂದ 6ನೇ ಕ್ರಾಸ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.