ADVERTISEMENT

ಹಳ್ಳದಲ್ಲಿ ಔಷಧ ಬಾಟಲ್‌ ಪತ್ತೆ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:50 IST
Last Updated 23 ಫೆಬ್ರುವರಿ 2026, 7:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಔಷಧ ಉಗ್ರಾಣದಿಂದ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೂರೈಕೆಯಾದ ಸಿರಪ್‌ ಬಾಟಲ್‌ಗಳು ಗಬ್ಬೂರು ಬೈಪಾಸ್‌ನ ಕರ್ಕಿ ಹಳ್ಳದ ಸೇತುವೆ ಪಕ್ಕ ಬಿಸಾಡಲಾಗಿದೆ.

50 ಎಂಎಲ್‌ ಇರುವ ಐರನ್‌ ಮತ್ತು ಪೋಲಿಕ್‌ ಆಸಿಡ್‌ ಸಿರಪ್‌ನ 315 ಔಷಧ ಬಾಟಲ್‌ಗಳು ಬಾಕ್ಸ್‌ನಲ್ಲಿ ಪತ್ತೆಯಾಗಿವೆ. ಬಾಟಲ್‌ ಒಂದಕ್ಕೆ ₹7.61 ದರ ಇದ್ದು, ಒಟ್ಟು ₹2,397.15 ಮೌಲ್ಯದ ಔಷಧವೆಂದು ಆರೋಗ್ಯ ಇಲಾಖೆ ಅಂದಾಜಿಸಿದೆ.

ADVERTISEMENT

‘ದುರುದ್ದೇಶದಿಂದ ರಸ್ತೆ ಪಕ್ಕ ಬಿಸಾಡಲಾಗಿದೆ’ ಎಂದು ಹುಬ್ಬಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಎ.ಇ. ಹುಲಗಣ್ಣ ಅವರು ಕಸಬಾಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ರಸ್ತೆ ಬದಿ ಸಿರಪ್‌ ಔಷಧ ಬಿಸಾಡಿರುವುದು ಗಮನಕ್ಕೆ ಬಂದಿದೆ. ಔಷಧ ಬಳಕೆಯ ಅವಧಿ 2027ರವರೆಗೆ ಇದ್ದಿದ್ದು, ಯಾರು, ಯಾಕಾಗಿ ಬಿಸಾಡಿದ್ದಾರೆ ಎನ್ನುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ಹೇಳಿದರು.

ವೈದ್ಯರಿಗೆ ₹24.47 ಲಕ್ಷ ವಂಚನೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನವನಗರದ ಡಾ. ಮಹಾಂತೇಶ ಅವರಿಗೆ ಲಿಂಕ್‌ ಕಳುಹಿಸಿದ ವ್ಯಕ್ತಿ, ಅವರಿಂದ ₹24.47 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಮಹಾಂತೇಶ ಅವರು ಫೇಸ್‌ಬುಕ್‌ ಖಾತೆ ನೋಡುತ್ತಿದ್ದಾಗ ಎಬಿಎಸ್‌ಎಲ್‌ ಕಂಪನಿಯ ಟ್ರೇಡಿಂಗ್‌ ಪ್ಲಾನ್‌ ಬಗ್ಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುತ್ತಿದ್ದ. ಅದನ್ನು ನಂಬಿದ ಅವರು, ಅದರಲ್ಲಿರುವ ಲಿಂಕ್‌ ಒತ್ತಿ ಎರಡು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಮೊಬೈಲ್‌ ನಂಬರ್‌ ಸೇರ್ಪಡೆ ಮಾಡಿಕೊಂಡಿದ್ದರು. ನಂತರ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಷೇರು ಮಾರುಕಟ್ಟೆಗೆ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಇಲ್ಲಿನ ಕೇಶ್ವಾಪುರದ ವಿನೋಭಾನಗರದ ರೈಲ್ವೆ ಕ್ವಾರ್ಟರ್ಸ್‌ನಲ್ಲಿರುವ ರೈಲ್ವೆ ಉದ್ಯೋಗಿ ವಿದ್ಯಾ ಕಬಾಡೆ ಅವರ ಮನೆಯ ಹಿಂಬಾಗಿಲಿನ ಬೀಗ ಮುರಿದು, ಆಲ್ಮೇರಾದಲ್ಲಿದ್ದ ₹2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕು ಇರಿತ: ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಭಾವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.