
ಹುಬ್ಬಳ್ಳಿ: ‘ಆಧಾರ್ ಸೇವಾ ಕೇಂದ್ರಗಳಲ್ಲಿ ಕನ್ನಡ ಬಳಕೆ ಜತೆಗೆ, ತಾಂತ್ರಿಕ ಸಮಸ್ಯೆಗಳ ಬಗ್ಗೆ ಭಿತ್ತಿ ಪತ್ರ ಅಂಟಿಸಬೇಕು. ನಿಯಮಕ್ಕಿಂತ ಹೆಚ್ಚು ಹಣ ವಸೂಲಿ ಮಾಡದೆ, ಸಾರ್ವಜನಿಕರಿಂದ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ನಗರದ ಕೇಶ್ವಾಪುರದ ಹುಬ್ಬಳ್ಳಿ ರೈಲ್ವೆ ವಿಭಾಗೀಯ ಕಚೇರಿ ಬಳಿ ಆರಂಭವಾಗಿರುವ ನೂತನ ಆಧಾರ್ ಸೇವಾ–ಯುಐಡಿಎಐ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವ ಸೇವೆಗಳಿಗೆ ದರ ಎಷ್ಟು ಎಂಬ ಬಗ್ಗೆ ಸೇವಾ ಕೇಂದ್ರದಲ್ಲಿ ಮಾಹಿತಿ ಫಲಕ ಹಾಕಬೇಕು. ಆಧಾರ್ ಸೇವಾ ಕೇಂದ್ರದಲ್ಲಿನ ಸೇವೆಗಳ ಕುರಿತು ವಿಡಿಯೊಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಬೇಕು’ ಎಂದರು.
‘ಅವಳಿ ನಗರದ ನಾಗರಿಕರ ಸೇವೆಗಾಗಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಧಾರವಾಡದಲ್ಲಿದ್ದ ಆಧಾರ್ ಕೇಂದ್ರದ ಟೆಂಡರ್ ಅವಧಿ ಮುಕ್ತಾಯವಾಗಿರುವುದರಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಹೊಸ ಟೆಂಡರ್ ಕರೆದು ಸೇವಾ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಪ್ರಸ್ತುತ ಜಿಲ್ಲೆಯಲ್ಲಿನ ಎರಡು ಕೇಂದ್ರಗಳ ಪೈಕಿ ಹುಬ್ಬಳ್ಳಿಯ ಕೇಂದ್ರ ಮಾತ್ರ ಸಕ್ರಿಯವಾಗಿದೆ. ಧಾರವಾಡ ನಗರ ಶಿಕ್ಷಣ ಕಾಶಿಯಾಗಿದ್ದು, ಇಲ್ಲಿ ಹಲವಾರು ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಇರುವುದರಿಂದ ಆಧಾರ್ ಕೇಂದ್ರದ ಬೇಡಿಕೆ ಹೆಚ್ಚಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಧಾರವಾಡ ನಗರದಲ್ಲಿಯೂ ಆಧಾರ್ ಸೇವಾ ಕೇಂದ್ರ ಪುನರಾರಂಭಿಸಲು ಜಿಲ್ಲಾಡಳಿತವು ಯುಐಡಿಎಐಗೆ ಪ್ರಸ್ತಾವ ಸಲ್ಲಿಸಿದೆ’ ಎಂದು ತಿಳಿಸಿದರು.
‘ಈ ನೂತನ ಕೇಂದ್ರದಲ್ಲಿ ನಾಲ್ಕು ಕೌಂಟರ್‌ಗಳಿದ್ದು, ಸುಗಮ ನಿರ್ವಹಣೆಗಾಗಿ ಯುಐಡಿಎಐ ವತಿಯಿಂದ ಆಪರೇಷನ್ ಮ್ಯಾನೇಜರ್ ಅವರನ್ನು ನೇಮಿಸಲಾಗಿದೆ. ಆಧಾರ್ಗೆ ಸಂಬಂಧಿತ ಎಲ್ಲ ಸೇವೆಗಳನ್ನು ಇಲ್ಲಿ ಪಡೆಯಬಹುದಾಗಿದೆ’ ಎಂದರು.
ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ, ಯುಐಡಿಎಐ ನಿರ್ದೇಶಕ ಮನೋಜ್ ಕುಮಾರ, ಸಾಮ್ಯೂಲ್ ರಾಯ್, ಜಿಲ್ಲಾ ಆಧಾರ್ ಸಂಯೋಜಕ ರುದ್ರೇಶ ಎಂ., ಯುಐಡಿಎಐ ಯೋಜನಾ ವ್ಯವಸ್ಥಾಪಕ ಜಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.